ಜಿಲ್ಲೆ

ವಿದ್ಯಾರ್ಥಿಗಳಿಂದ 130 ಯೂನಿಟ್ ರಕ್ತಸಂಗ್ರಹ: ಕಾವೇರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜನೆ

ಕೆ.ಎನ್.ರಾಘವೇಂದ್ರ

ಮಂಡ್ಯ: ತಾಲೂಕಿನ ಸುಂಡಹಳ್ಳಿ ಗ್ರಾಮದಲ್ಲಿರುವ ಕಾವೇರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ 130 ಯೂನಿಟ್ ಸಂಗ್ರಹಿಸಲಾಯಿತು.

ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ನಡೆದ ಶಿಬಿರದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಸಂಸ್ಥೆಯ ಸಿಬ್ಬಂದಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು. ಇವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಸಂಗ್ರಹಿಸಿದ ರಕ್ತವನ್ನು ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯ ರಕ್ತನಿಧಿ ಕೇಂದ್ರಕ್ಕೆ ಹಸ್ತಾಂತರ ಮಾಡಲಾಯಿತು.

ಇದಕ್ಕೂ ಮುನ್ನ ಶಿಬಿರಕ್ಕೆ ಚಾಲನೆ ನೀಡಿದ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿ, ಎಲ್ಲ ದಾನಕ್ಕಿಂತ ರಕ್ತದಾನ ಶ್ರೇಷ್ಟ ದಾನವಾಗಿದೆ. ರಕ್ತವನ್ನು ಔಷಧ ಎಂದು ಪರಿಗಣಿಸಲಾಗುತ್ತಿದೆ. ಇಂತಹ ಶಿಬಿರವು ಮಾನವೀಯ ಮೌಲ್ಯವನ್ನು ಬಿತ್ತುವುದಾಗಿದೆ. ಪ್ರಸ್ತುತ ಸಂದರ್ಭದಲ್ಲಿ ಅವಶ್ಯಕತೆ ತಕ್ಕಂತೆ ರಕ್ತ ಸಿಗುತ್ತಿಲ್ಲ. ಆದ್ದರಿಂದ ರಕ್ತದಾನ ಮಾಡುವವರ ಹೆಚ್ಚಳವಾಗಬೇಕು. ರಕ್ತದಾನದಿಂದ ಭಾತೃತ್ವ ಭಾವನೆ ಬೆಳೆಯುತ್ತದೆ. ಒಂದು ಯೂನಿಟ್ ರಕ್ತದಿಂದ ಮೂರ‌್ನಾಲ್ಕು ಜನರಿಗೆ ಅನುಕೂಲವಾಗಲಿದೆ ಎಂದರು.

ಅಲಯನ್ಸ್ ಕ್ಲಬ್‌ನ ಪ್ರಾಂತಪಾಲ ಕೆ.ಟಿ.ಹನುಮಂತು ಮಾತನಾಡಿ, ಭಾರತದಲ್ಲಿ ಅಂದಾಜು 143 ಕೋಟಿ ಜನಸಂಖ್ಯೆ ಇದೆ. ಅಂತೆಯೇ ದೇಶದಲ್ಲಿ ಪ್ರತಿನಿತ್ಯ 38 ಸಾವಿರ ಯೂನಿಟ್ ರಕ್ತದ ಅವಶ್ಯಕತೆ ಇದೆ. ಆದರೆ ಸಿಗುತ್ತಿರುವ ರಕ್ತದ ಪ್ರಮಾಣ 20 ರಿಂದ 22 ಸಾವಿರ ಯೂನಿಟ್ ಮಾತ್ರ. ಈ ಹಿನ್ನೆಲೆಯಲ್ಲಿ ಹೆಚ್ಚಿನ ರಕ್ತದಾನದ ಅವಶ್ಯಕತೆ ಇದೆ. ಎಷ್ಟೋ ಜನ ಸರಿಯಾದ ಕಾಲಕ್ಕೆ ರಕ್ತ ಸಿಗದೇ ಸಾವಿಗೀಡಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಕಾಲೇಜಿನ ಅಧ್ಯಕ್ಷ ಡಾ.ಎಚ್.ಪಿ.ರಾಜು ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಪ್ರೊ.ಟಿ.ನಾಗೇಂದ್ರ, ಪ್ರಾಂಶುಪಾಲ ಪ್ರೊ.ಎ.ಎಸ್. ಶ್ರೀಕಂಠಪ್ಪ, ಉಪ ಪ್ರಾಂಶುಪಾಲ ಪ್ರೊ.ಮಂಜುನಾಥ್, ರೆಡ್‌ಕ್ರಾಸ್ ಸಂಸ್ಥೆ ಜಂಟಿ ಕಾರ್ಯದರ್ಶಿ ರಂಗಸ್ವಾಮಿ, ಡಾ.ಆರತಿ, ಡಾ.ಎ.ಪಿ. ಸವಿತಾ ಇತರರಿದ್ದರು.