ಜಿಲ್ಲೆ

ಜೀವ ರಕ್ಷಿಸುವ ಏಕೈಕ ದಾನ : ರಕ್ತದಾನ ಶಿಬಿರ ಉದ್ಘಾಟಿಸಿ ವೆಂಕಟೇಶ ಹೆಬ್ಬಾರ್ ಬಣ್ಣನೆ

ಸೌಮ್ಯ ಆರ್

ಮೂಲ್ಕಿ: ಇನ್ನೊಬ್ಬರ ಜೀವ ರಕ್ಷಣೆಯ ಜತೆಗೆ ನಮ್ಮ ಆರೋಗ್ಯ ರಕ್ಷಿಸಲು ಸಹಕರಿಸುವ ಏಕೈಕ ಅತ್ಯುತ್ತಮ ದಾನ ರಕ್ತದಾನ ಎಂದು ಮೂಲ್ಕಿ ಲಯನ್ಸ್ ಕ್ಲಬ್ ಬಪ್ಪನಾಡು ಇನ್‌ಸ್ಪಾಯರ್ ಸ್ಥಾಪಕ ಅಧ್ಯಕ್ಷ ವೆಂಕಟೇಶ ಹೆಬ್ಬಾರ್ ಹೇಳಿದರು.

ಮೂಲ್ಕಿ ವಿಜಯ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಘಟಕ, ರೆಡ್ ಕ್ರಾಸ್, ರೋವರ್ಸ್-ರೆಂಜರ್ಸ್ ಮತ್ತು ಎನ್‌ಸಿಸಿ ಆಶ್ರಯದಲ್ಲಿ ಹಾಗೂ ಲಯನ್ಸ್ ಕ್ಲಬ್ ಬಪ್ಪನಾಡು ಇನ್‌ಸ್ಪಾಯರ್ ಮತ್ತು ಕೆಎಂಸಿ ಆಸ್ಪತ್ರೆ ಅತ್ತಾವರ ಸಹಕಾರದೊಂದಿಗೆ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಪದವಿ ಕಾಲೇಜು ಪ್ರಾಂಶುಪಾಲ ಪ್ರೊ.ವೆಂಕಟೇಶ ಭಟ್ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಕ್ಲಬ್ ಬಪ್ಪನಾಡು ಇನ್‌ಸ್ಪಾಯರ್ ಅಧ್ಯಕ್ಷ ಅನಿಲ್ ಕುಮಾರ್, ಮಾಜಿ ವಲಯ ಅಧ್ಯಕ್ಷೆ ಪ್ರತಿಭಾ ಹೆಬ್ಬಾರ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ.ಅರುಣ್ ಕುಮಾರ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಶೈಲಜಾ, ಕೆಎಂಸಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವೃಂದಾ ಉಪಸ್ಥಿತರಿದ್ದರು. ವಿದ್ಯಾರ್ಥಿಗಳೊಂದಿಗೆ ಮೂಲ್ಕಿ ಪೊಲೀಸ್ ಠಾಣೆಯ ಸಿಬ್ಬಂದಿ ರಕ್ತದಾನ ಮಾಡಿದರು. 72 ಯೂನಿಟ್ ರಕ್ತ ಸಂಗ್ರಹಿಸಲಾಯಿತು. ಲಾವಣ್ಯ ಕಾರ್ಯಕ್ರಮ ನಿರೂಪಿಸಿದರು. ರಶ್ಮಿ ಪ್ರಾರ್ಥಿಸಿದರು. ಅಭಿನಂದ ವಂದಿಸಿದರು.