ಜಿಲ್ಲೆ

ದಿನದ 24 ಗಂಟೆ ನಡೆಯಲಿದೆ ರಕ್ತದಾನ: ದಾಖಲೆ ಬರೆಯಲು ಸಜ್ಜಾದ ಜೀವಧಾರೆ ಟ್ರಸ್ಟ್

ಕೆ.ಎನ್.ರಾಘವೇಂದ್ರ

ಮಂಡ್ಯ: ನೊಂದ ಜನಗಳ ಜತೆ ನಮ್ಮ ಹೆಜ್ಜೆ ಎನ್ನುವ ಘೋಷ ವಾಕ್ಯದೊಂದಿಗೆ ಹಲವು ವರ್ಷದಿಂದ ರಕ್ತದಾನ ಶಿಬಿರ ಆಯೋಜಿಸುತ್ತಿರುವ ಜೀವಧಾರೆ ಟ್ರಸ್ಟ್, ಇದೀಗ ಮತ್ತೊಂದು ದಾಖಲೆಯ ಶಿಬಿರಕ್ಕೆ ಸಜ್ಜಾಗಿದೆ. ಸುಭಾಷ್ ಚಂದ್ರ ಬೋಸ್ ಅವರ 128ನೇ ಜನ್ಮದಿನದ ಅಂಗವಾಗಿ ಜಿಲ್ಲೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ದಿನದ 24 ಗಂಟೆಯೂ ರಕ್ತ ಸಂಗ್ರಹ ಮಾಡಲಾಗುತ್ತಿದೆ. ಇದಕ್ಕೆ ಅಗತ್ಯವಿರುವ ಸಿದ್ಧತೆ ನಡೆದಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಸ್ಟ್‌ನ ಅಧ್ಯಕ್ಷ ನಟರಾಜು, ಕಾರ್ಗಿಲ್ ವಿಜಯೋತ್ಸವ, ಸುಭಾಷ್ ಚಂದ್ರ ಬೋಸ್, ಭಗತ್‌ಸಿಂಗ್ ನೆನಪಿನಾರ್ಥ ಜೀವಧಾರೆ ಟ್ರಸ್ಟ್ ಶಿಬಿರ ಆಯೋಜಿಸಿಕೊಂಡು ಬರುತ್ತಿದೆ. ಅದೇ ರೀತಿ ಜ.23ರಂದು ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶಿಬಿರ ಹಮ್ಮಿಕೊಳ್ಳಲಾಗಿದೆ. ಟ್ರಸ್ಟ್‌ನ ವತಿಯಿಂದ ಇದುವರೆಗೂ 344 ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಅಂತೆಯೇ 43 ಸಾವಿರ ಯೂನಿಟ್ ರಕ್ತ ಸಂಗ್ರಹಿಸಿ ಸೈನಿಕರ ಆಸ್ಪತ್ರೆಯನ್ನೂ ಒಳಗೊಂಡಂತೆ ಸರ್ಕಾರಿ ರಕ್ತನಿಧಿ ಕೇಂದ್ರಗಳಿಗೆ ಹಸ್ತಾಂತರ ಮಾಡಲಾಗುತ್ತಿದೆ ಎಂದರು.

23ರಂದು ಬೆಳಗ್ಗೆ 8 ಗಂಟೆಗೆ ಪ್ರಾರಂಭವಾಗುವ ರಕ್ತದಾನ ಶಿಬಿರ 24ರ ಬೆಳಗ್ಗೆ 8ರವರೆಗೆ ನಡೆಯಲಿದೆ. ಶಿಬಿರ ಸಂಬಂಧ 128 ಹಳ್ಳಿಗೆ ಭೇಟಿ ಪ್ರಚಾರ ಮಾಡಲಾಗಿದೆ. ಅಂತೆಯೇ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ಜಾಥಾ ಮೂಲಕ ಪ್ರಚಾರ ಮಾಡಲಾಗಿದೆ. ಟ್ರಸ್ಟ್‌ನಿಂದ ನಡೆಯುವ 345ನೇ ರಕ್ತದಾನ ಶಿಬಿರದಲ್ಲಿ 1,500 ಯೂನಿಟ್ ಸಂಗ್ರಹವಾಗುವ ನಿರೀಕ್ಷೆಯಿದೆ. ಕಾರ್ಯಕ್ರಮದಲ್ಲಿ ಬೆಳಗ್ಗಿನ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿಯ ಊಟದ ವ್ಯವಸ್ಥೆ ಮಾಡಲಾಗಿದೆ. ಸರ್ಕಾರಿ ಆಸ್ಪತ್ರೆಯಿಂದ ರಕ್ತ ಸಂಗ್ರಹಿಸಲು ವೈದ್ಯ ಸಿಬ್ಬಂದಿ 3 ಪಾಳಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಜತೆಗೆ ಸರ್ಕಾರಿ ಆಸ್ಪತ್ರೆಯಿಂದ 150 ಹಾಸಿಗೆ ವ್ಯವಸ್ಥೆ ಒದಗಿಸಲಾಗುವುದು. ಸಂಗ್ರಹವಾದ ರಕ್ತವನ್ನು ಸೈನಿಕ ಆಸ್ಪತ್ರೆಗೆ ಬೇಕಾಗಿರುಷ್ಟು ತಲುಪಿಸಲಾಗುವುದು. ಉಳಿದ ಎಲ್ಲ ರಕ್ತವನ್ನು ಸರ್ಕಾರಿ ರಕ್ತ ನಿಧಿ ಕೇಂದ್ರ ಹಾಗೂ ಅಗತ್ಯವಿರುವ ಆಸ್ಪತ್ರೆಗೆ ನೀಡಲಾಗುವುದು ಎಂದು ವಿವರಿಸಿದರು.

ಟ್ರಸ್ಟ್‌ನ ಸದಸ್ಯರಾದ ಗಣೇಶ್, ಅಭಿ, ಮಹದೇವ, ಉದಯ್, ರವಿಕುಮಾರ್, ಹನುಮೇಶ್, ಕುಮಾರ್ ಇದ್ದರು.

904 ಯೂನಿಟ್ ರಕ್ತ ಸಂಗ್ರಹಿಸಿದ ಹೆಗ್ಗಳಿಕೆ

ಜೀವಧಾರೆ ಟ್ರಸ್ಟ್‌ನಿಂದ 2019ರಲ್ಲಿ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ನಗರದಲ್ಲಿ ಶಿಬಿರ ಆಯೋಜಿಸಲಾಗಿತ್ತು. ಅಂದು ಒಂದೇ ದಿನ ಬರೋಬರಿ 904 ಯೂನಿಟ್ ರಕ್ತ ಸಂಗ್ರಹವಾಗಿತ್ತು. ಇದು ಈವರೆಗಿನ ದಾಖಲೆಯಾಗಿ ಉಳಿದಿದೆ.

ಇನ್ನು ಕಳೆದ ವರ್ಷ ಸುಭಾಷ್ ಚಂದ್ರ ಬೋಸ್ ಜನ್ಮದಿನಕ್ಕಾಗಿ ನಗರದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ 750 ಜನರು ರಕ್ತದಾನ ಮಾಡಿದರು. ಈ ಶಿಬಿರದ ವಿಶೇಷವೆಂದರೆ ಮೊದಲ ಬಾರಿಗೆ ಸೈನಿಕರಿಗಾಗಿ ರಕ್ತ ಸಂಗ್ರಹದಂತಹ ಅತ್ಯುತ್ತಮ ಕೆಲಸ ಮಾಡಲಾಗಿತ್ತು. ಅದರಂತೆ ಸೈನಿಕರಿಗೆ ರಕ್ತ ನೀಡಲು ಯುವಕರು ಪೈಪೋಟಿಗೆ ಬಿದ್ದವರಂತೆ ದಾನ ಮಾಡಿದರು. ಮಂಡ್ಯ, ಚಾಮರಾಜನಗರ, ರಾಮನಗರ, ಹಾಸನ, ಬೆಳಗಾವಿ, ಬೆಂಗಳೂರು, ಮೈಸೂರು ಜಿಲ್ಲೆಯಿಂದ ಆಗಮಿಸಿ ರಕ್ತದಾನ ಮಾಡಿದರು. ಇದರಲ್ಲಿ ಸೈನಿಕರೂ ಕೂಡ ಸೇರಿಕೊಂಡಿದ್ದರು. ಅಂದು ಸಂಗ್ರಹಿಸಿದ ರಕ್ತದಲ್ಲಿ ಬೆಂಗಳೂರಿನ ಕಮಾಂಡ್ ಹಾಸ್ಟಿಟಲ್ ಏರ್‌ಪೋರ್ಸ್ 50, ಮೈಸೂರಿನ ಕೆ.ಆರ್.ಆಸ್ಪತ್ರೆಗೆ 164 ಹಾಗೂ ಉಳಿದ ರಕ್ತವನ್ನು ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಹಸ್ತಾಂತರಿಸಲಾಗಿತ್ತು. ಇದರೊಂದಿಗೆ ಉತ್ತಮ ಶಿಬಿರ ಆಯೋಜಿಸಿದ ಹೆಗ್ಗಳಿಕೆ ಜೀವಧಾರೆ ಟ್ರಸ್ಟ್ ಮುಡಿಗೇರಿತು.

ಅಪೂರ್ವ ದಿನಕ್ಕೆ ಜತೆಯಾಗಿ

ರಕ್ತಕ್ಕೆ ರಕ್ತವೇ ಪರ್ಯಾಯ. ಇದನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ಅಪಘಾತ, ಹೆರಿಗೆ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಹೆಚ್ಚಾಗಿದೆ. ಅದರಂತೆ ಜಿಲ್ಲೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಈ ಹಿನ್ನೆಲೆಯಲ್ಲಿ ಸದುದ್ದೇಶದಿಂದ ಆಯೋಜಿಸಿರುವ ಶಿಬಿರದಲ್ಲಿ ಭಾಗಿಯಾಗಿ ರಕ್ತದಾನ ಮಾಡಲು ಸಾರ್ವಜನಿಕರು ಮುಂದಾಗಬೇಕಿದೆ. ಈ ನಿಟ್ಟಿನಲ್ಲಿ ಈಗಾಗಲೇ ಹಲವು ಗಣ್ಯರು ಸಂದೇಶ ನೀಡಿ ಟ್ರಸ್ಟ್‌ನ ಪ್ರಯತ್ನಕ್ಕೆ ಕೈಜೋಡಿಸಿದ್ದಾರೆ.