ಮಂಡ್ಯ: ಮಂಡ್ಯ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ 110 ಯುನಿಟ್ ರಕ್ತಸಂಗ್ರಹವಾಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕ, ಮಂಡ್ಯ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ವಿಶ್ವ ಸ್ವಯಂ ಪ್ರೇರಿತ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಶಿಬಿರದಲ್ಲಿ ವಿದ್ಯಾರ್ಥಿಗಳು ರಕ್ತದಾನ ಮಾಡಿದರು.
ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ರಕ್ತದಾನ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಇದರಿಂದ ಸಾವಿರಾರೂ ಜನರಿಗೆ ಅನುಕೂಲವಾಗಲಿದೆ. ದೈಹಿಕ ಹಾಗೂ ಮಾನಸಿಕವಾಗಿ ಸಧೃಡವಾಗಿರುವವರು ರಕ್ತದಾನ ಮಾಡಬಹುದು. ಅದರಲ್ಲಿಯೂ ವಿದ್ಯಾರ್ಥಿಗಳು ರಕ್ತದಾನ ಮಾಡಲು ಆಸಕ್ತಿ ತೋರಬೇಕು. ದಾನದ ಬಳಿಕ ಕೆಲವೇ ದಿನದಲ್ಲಿ ಮತ್ತೆ ರಕ್ತಸಂಗ್ರಹವಾಗಲಿದೆ. ಪ್ರತಿ ವರ್ಷಕ್ಕೆ ಮೂರು ಬಾರಿ ರಕ್ತ ಕೊಡಬಹುದು. ಇದರಿಂದ ಆರೋಗ್ಯವೂ ಚೆನ್ನಾಗಿರುತ್ತದೆ ಎಂದು ಸಲಹೆ ನೀಡಿದರು.
ವಿಧಾನಸಭಾ ಚುನಾವಣಾ ಸಮಯದಲ್ಲಿ ರಕ್ತಕ್ಕೆ ಸಮಸ್ಯೆಯಾಗಿತ್ತು. ಆ ಸಮಯದಲ್ಲಿ ಶಿಬಿರಗಳನ್ನು ಆಯೋಜನೆ ಮಾಡಲು ಸಾಧ್ಯವಾಗಿರಲಿಲ್ಲ. ಪರಿಣಾಮ ಹಲವರು ನೋವನ್ನು ಅನುಭವಿಸುವಂತಾಗಿತ್ತು. ಈ ಹಿನ್ನೆಲೆಯಲ್ಲಿ ಹೆಚ್ಚು ಶಿಬಿರಗಳನ್ನು ಆಯೋಜಿಸಿ ರಕ್ತಸಂಗ್ರಹ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿರುವ ಮೂರು ಕೇಂದ್ರದಲ್ಲಿ ಶೇಖರಿಸಿ ಅಗತ್ಯವಿದ್ದವರಿಗೆ ನೀಡಲಾಗುತ್ತಿದೆ. ಅಂತೆಯೇ ಮಂಡ್ಯ ವಿಶ್ವವಿದ್ಯಾನಿಲಯದಲ್ಲಿ ಸಾವಿರಾರೂ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅವರೆಲ್ಲರೂ ಮನಸ್ಸು ಮಾಡಿದರೆ ಪ್ರತಿ ತಿಂಗಳಿಗೊಂದು ಶಿಬಿರ ಆಯೋಜಿಸಬಹುದು ಎಂದು ಪ್ರೇರೆಪಿಸಿದ ಎಡಿಸಿ, ರಕ್ತಸಂಗ್ರಹಿಸಲು ಮೊಬೈಲ್ ವಾಹನದ ಸೌಲಭ್ಯವೂ ಇದೆ. ಅದನ್ನು ಬಳಸಿಕೊಳ್ಳಬಹುದು. ಶಿಬಿರದ ಅಂಗವಾಗಿ ವಿವಿಧ ಸ್ಪರ್ಧೆ ಆಯೋಜಿಸಲಾಗುತ್ತಿದೆ. ವಿಜೇತರಾದವರಿಗೆ ಜೂ.14ರಂದು ಆಯೋಜಿಸಿರುವ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ ಮಾಡಲಾಗುವುದು. ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಜಿಲ್ಲಾದ್ಯಂತ ಶಿಬಿರ ಮಾಡಲಾಗುತ್ತಿದೆ ಎಂದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ದಾನಕ್ಕೆ ಹೆಚ್ಚಿನ ಮಹತ್ವವಿದೆ. ಅದರಂತೆ ರಕ್ತದಾನ ಮಾಡುವುದು ನಿಸ್ವಾರ್ಥ ಸೇವೆ ಎನ್ನಬಹುದು ಎಂದರು.
ಮಂಡ್ಯ ವಿವಿ ಕುಲಸಚಿವ ಡಾ.ನಾಗರಾಜು ಚೊಳ್ಳ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಆಶಾಲತಾ, ಕೃಷಿಕ ಲಯನ್ಸ್ ಸಂಸ್ಥೆಯ ಆಡಳಿತಾಧಿಕಾರಿ ಕೆ.ಟಿ.ಹನುಮಂತು, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಡಾ.ಆನಂದ್, ಪ್ರೊ.ನೇತ್ರಾ, ಪ್ರೊ.ಯೋಗಾನರಸಿಂಹಾಚಾರಿ, ರಕ್ತನಿಧಿ ಕೇಂದ್ರದ ಮುರುಳೀಧರ್ ಭಟ್, ಜಿಪಂ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಲಂಕೇಶ್ ಮಂಗಲ ಇತರರಿದ್ದರು.