ಜಿಲ್ಲೆ

210 ಯೂನಿಟ್ ರಕ್ತಸಂಗ್ರಹ: ಮಾದರಿಯಾದ ಡಿಸಿ, ಎಡಿಸಿ

ಕೆ.ಎನ್.ರಾಘವೇಂದ್ರ

ಮಂಡ್ಯ: ರಾಜರ್ಷಿ ನಾಲ್ವಡಿ ಕೃಷ್ಣರಾಜ ಜಯಂತಿ ಅಂಗವಾಗಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ 210 ಯೂನಿಟ್ ರಕ್ತಸಂಗ್ರಹವಾಯಿತು. ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಆಹಾರ ಇಲಾಖೆ ಉಪನಿರ್ದೇಶಕ ಕೃಷ್ಣಕುಮಾರ್ ಸೇರಿದಂತೆ ಜಿಲ್ಲಾಧಿಕಾರಿ, ಜಿಪಂ ಹಾಗೂ ಸರ್ಕಾರಿ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ರಕ್ತದಾನ ಮಾಡುವ ಮೂಲಕ ಮಾದರಿಯಾದರು.

ಮಿಮ್ಸ್ ರಕ್ತನಿಧಿ ಕೇಂದ್ರದಲ್ಲಿ ರಕ್ತಸಂಗ್ರಹ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ರೋಗಿಗಳಿಗೆ ಸಮಸ್ಯೆಯಾಗಿತ್ತು. ಈ ಹಿನ್ನೆಲೆಯಲ್ಲಿ ನಾಲ್ವಡಿ ಅವರ ಜಯಂತಿ ಅಂಗವಾಗಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಶಿಬಿರಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಇದಕ್ಕೆ ಹಲವು ಜನಪರ ಸಂಘಟನೆಗಳು ಸಾಥ್ ನೀಡಿದವು. ಎಲ್ಲರ ಪ್ರಯತ್ನ ಲವಾಗಿ ಶಿಬಿರ ಯಶಸ್ವಿಯಾಯಿತು. ಅಧಿಕಾರಿಗಳೇ ರಕ್ತದಾನ ಮಾಡಿದ್ದು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಯಿತು.

ಡಿಸಿ ಡಾ.ಎಚ್.ಎನ್.ಗೋಪಾಲಕೃಷ್ಣ ಮಾತನಾಡಿ, ಅಪಘಾತಕ್ಕೆ ಒಳಗಾದ ಸಂದರ್ಭದಲ್ಲಿ, ಶಸಚಿಕಿತ್ಸೆ ಹಾಗೂ ರಕ್ತದ ಕೊರತೆ ಇರುವ ರೋಗಿಗಳ ಪ್ರಾಣ ಉಳಿಸಲು ರಕ್ತದ ಅವಶ್ಯಕತೆ ಇದೆ. ಸ್ವಯಂ ಪ್ರೇರಿತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರದಲ್ಲಿ ಭಾಗವಹಿಸಬೇಕು. ಜೂ.14ರಂದು ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸಲಾಗುವುದು. ಅದರ ಅಂಗವಾಗಿ ವಿವಿಧ ಸ್ಥಳಗಳಲ್ಲಿ ಶಿಬಿರವನ್ನು ಆಯೋಜಿಸಲಾಗುತ್ತಿದೆ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸೀಫ್ ರಕ್ತದಾನಿಗಳಿಗೆ ಪ್ರಮಾಣ ಪತ್ರ ವಿತರಿಸಿದರು. ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ, ನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಜೀವಧಾರೆ ಟ್ರಸ್ಟ್ ಅಧ್ಯಕ್ಷ ನಟರಾಜು, ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಆಶಾಲತಾ, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ ಇತರರಿದ್ದರು.