ಮಂಡ್ಯ: ನೊಂದ ನಗಳ ಜತೆ ನಮ್ಮ ಹೆಜ್ಜೆ ಎನ್ನುವ ಘೋಷ ವಾಕ್ಯದೊಂದಿಗೆ ಹಲವು ವರ್ಷದಿಂದ ರಕ್ತದಾನ ಶಿಬಿರ ಆಯೋಜಿಸುತ್ತಿರುವ ಜೀವಧಾರೆ ಟ್ರಸ್ಟ್, ಇದೇ ಮೊದಲ ಬಾರಿಗೆ ಸೈನಿಕರಿಗಾಗಿ ರಕ್ತ ಸಂಗ್ರಹದಂತಹ ಅತ್ಯುತ್ತಮ ಕೆಲಸಕ್ಕೆ ಮುಂದಾಗಿದೆ.
ಸೈನಿಕ ಪಿತಾಮಹಾ ಸುಭಾಷ್‌ಚಂದ್ರ ಬೋಸ್ ಅವರ ಜಯಂತ್ಯುತ್ಸವದ ಅಂಗವಾಗಿ ಈಗಾಗಲೇ 14 ಜಿಲ್ಲೆ ಹಾಗೂ ಅಂಡಮಾನ್‌ನಲ್ಲಿ ಶಿಬಿರದ ಜತೆಗೆ ಸೈನಿಕರನ್ನು ಸನ್ಮಾನಿಸುವ ಕಾಯಕವನ್ನು ಟ್ರಸ್ಟ್ ಮಾಡಿಕೊಂಡು ಬರುತ್ತಿದೆ. ಇದು ಸೇರಿದಂತೆ ಸುಮಾರು 317 ಶಿಬಿರವನ್ನು ಆಯೋಜಿಸಿ ಸಂಗ್ರಹಿಸಿದ ರಕ್ತವನ್ನು ಸರ್ಕಾರಿ ಆಸ್ಪತ್ರೆಗೆ ಹಸ್ತಾಂತರ ಮಾಡಲಾಗಿದೆ.
ಅದೇ ರೀತಿ 127ನೇ ಜಯಂತ್ಯುತ್ಸವದ ಅಂಗವಾಗಿ ಜ.23ರಂದು ನಗರದ ವಿಠ್ಠಲ ಸಮುದಾಯ ಭವನದಲ್ಲಿ ಬೆಳಗ್ಗೆ 8ಗಂಟೆಯಿಂದ ಶಿಬಿರ ನಡೆಯಲಿದೆ. ವೀರ ಸೈನಿಕ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಸ್ಮರಣಾರ್ಥ ಆಯೋಜಿಸಿರುವ ಶಿಬಿರದಲ್ಲಿ ಸುಮಾರು 1,500 ಯೂನಿಟ್ ರಕ್ತ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಇನ್ನು ಈ ಬಾರಿ ವಿಶೇಷ ಸಂಗ್ರಹಿಸಿದ ರಕ್ತವನ್ನು ಬೆಂಗಳೂರಿನ ಕಮಾಂಡ್ ಹಾಸ್ಟಿಟಲ್ ಏರ್‌ಪೋರ್ಸ್‌ಗೆ ನೀಡಲಾಗುತ್ತಿದೆ. ಶಿಬಿರಕ್ಕೆ ಸೈನಿಕರು ಆಗಮಿಸಲಿದ್ದು, ಅವಶ್ಯಕತೆ ತಕ್ಕಂತೆ ರಕ್ತವನ್ನು ಪಡೆದುಕೊಂಡು ಹೋಗಲಿದ್ದಾರೆ.
ಇನ್ನು ಹಿಂದೆ ಒಂದೇ ದಿನ 900 ಯೂನಿಟ್ ರಕ್ತ ಸಂಗ್ರಹಿಸಿ ದಾಖಲೆ ನಿರ್ಮಿಸಿರುವ ಜೀವಧಾರೆ ಟ್ರಸ್ಟ್, ಈ ಬಾರಿ ಅದನ್ನು ಮುರಿಯುವ ಗುರಿ ಹೊಂದಿದೆ. ಅದಕ್ಕೆ ತಕ್ಕಂತೆ ಜಿಲ್ಲೆಯ ಸುಮಾರು 127 ಗ್ರಾಮಗಳನ್ನು ಸಂಪರ್ಕಿಸಿ ರಕ್ತದಾನ ಮಾಡಲು ಆಗಮಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ. ಜತೆಗೆ ಸಣ್ಣಪುಟ್ಟ ಅಂಗಡಿ, ವ್ಯಾಪಾರಸ್ಥರು, ವಿದ್ಯಾರ್ಥಿಗಳು, ಕಾರ್ಮಿಕರು ಸೇರಿದಂತೆ ಎಲ್ಲ ವರ್ಗವನ್ನು ಕೇಳಿಕೊಳ್ಳಲಾಗಿದೆ. ಇನ್ನು ಟ್ರಸ್ಟ್‌ನ ಉತ್ತಮ ಕಾರ್ಯಕ್ಕೆ ಸಾಥ್ ನೀಡಿರುವ ಜಿಲ್ಲೆಯ ಹಲವು ಸಂಘಟನೆಗಳು, ಪ್ರಮುಖ ವಾಣಿಜ್ಯೋದಮಿಗಳು ಹಾಗೂ ಚಿತ್ರಕಲಾವಿದರು ಶಿಬಿರದಲ್ಲಿ ಭಾಗವಹಿಸಿ ‘ಸೈನಿಕರಿಗಾಗಿ ರಕ್ತದಾನ ಮಾಡಿ’ ಎಂದು ಮನವಿ ಮಾಡಿಕೊಂಡಿದ್ದಾರೆ.
ಪ್ರೆಸ್‌ಕ್ಲಬ್‌ನಲ್ಲಿ ಫೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಟ್ರಸ್ಟ್‌ನ ಅಧ್ಯಕ್ಷ ನಟರಾಜು, ಗುಡಿ ಇಲ್ಲದಿದ್ದರೂ ಗಡಿಯಲ್ಲಿ ನಿಂತು ಕಾಯುವ ದೈವ ಸೈನಿಕರು. ಆದ್ದರಿಂದ ಜನರು ನೀಡಿರುವ ರಕ್ತ ಈ ಬಾರಿ ಸೈನಿಕರ ಪಾದಸ್ಪರ್ಶಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಸ್ವಯಂ ಪ್ರೇರಿತರಾಗಿ ಆಗಮಿಸಿ ರಕ್ತದಾನ ಮಾಡಬೇಕೆಂದು ಮನವಿ ಮಾಡಿದರು.
ನಿವೃತ್ತ ಸೈನಿಕ ಉದಯಕುಮಾರ್ ಮಾತನಾಡಿ, ಟ್ರಸ್ಟ್‌ನಿಂದ ಸಂಗ್ರಹಿಸುವ ರಕ್ತವನ್ನು ಸೈನಿಕರಿಗೆ ನೀಡಲಾಗುವುದು. ಈ ಸಂಬಂಧ ಈಗಾಗಲೇ ಆಸ್ಪತ್ರೆಯ ಮುಖ್ಯಸ್ಥರನ್ನು ಸಂಪರ್ಕಿಸಿದ್ದೇವೆ. ಸೈನಿಕ ವಿಭಾಗದ ಮುಖ್ಯಸ್ಥರನ್ನು ದೂರವಾಣಿ ಮುಖೇನ ಸಂಪರ್ಕಿಸಿ ಶಿಬಿರದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದೇವೆ. ಅವರು ಬರಲು ಒಪ್ಪಿಕೊಂಡಿದ್ದಾರೆ. ಅವರಿಗೆ ಅಗತ್ಯವಿರುವ ರಕ್ತವನ್ನು ನೀಡಲಾಗುತ್ತದೆ. ಉಳಿದಿದ್ದನ್ನು ಸರ್ಕಾರಿ ಆಸ್ಪತ್ರೆಗೆ ನೀಡಲಾಗುವುದು ಎಂದು ವಿವರಿಸಿದರು.
ನಿವೃತ್ತ ಸೈನಿಕ ರವಿ, ಜೀವಧಾರೆ ಟ್ರಸ್ಟ್‌ನ ಮಹದೇವು, ಯೋಗಣ್ಣ, ಕುಮಾರ್, ಸುನೀಲ್, ಹನುಮ ಇದ್ದರು.