ಮಂಡ್ಯ: ತಾಲೂಕಿನ ಸಿದ್ದಯ್ಯನಕೊಪ್ಪಲು ಬಳಿಯ ಕಾವೇರಿ ತಾಂತ್ರಿಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ 80 ಯೂನಿಟ್ ರಕ್ತವನ್ನು ವಿದ್ಯಾರ್ಥಿಗಳು ಸಂಗ್ರಹಿಸಿ ಮಾದರಿಯಾದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಮಿಮ್ಸ್ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ಕಾಲೇಜಿನಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು. ಇದಕ್ಕೂ ಮೊದಲು ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ವಿದ್ಯಾರ್ಥಿಗಳು ಹಾಗೂ ಯುವಜನರಲ್ಲಿ ಸಮಾಜಕ್ಕೆ ಏನಾದರೂ ಕೊಡುಗೆ ಕೊಡುವ ಪ್ರಜ್ಞೆ ಬಂದರೆ ಮುಂದೆ ದೊಡ್ಡ ವ್ಯಕ್ತಿಯಾಗಿ ಬೆಳೆಯಲು ಸಾಧ್ಯ. ರಕ್ತದ ಪೂರೈಕೆಗಾಗಿ ಜೂ.4 ರಿಂದ ಡಿಸೆಂಬರ್ 2023 ರ ಕೊನೆಯವರೆಗೆ ಸಪ್ತಾಹ ಆಚರಣೆ ಮಾಡುವ ಮೂಲಕ ಅತಿ ಹೆಚ್ಚು ರಕ್ತದಾನ ಶಿಬಿರಗಳನ್ನು ಜಿಲ್ಲೆಯಲ್ಲಿ ಆಯೋಜನೆ ಮಾಡಲಾಗುತ್ತಿದೆ ಎಂದರು.
ಬೌದ್ಧಿಕವಾಗಿ ಆರೋಗ್ಯ ಚೆನ್ನಾಗಿರಬೇಕಾದರೆ ಪ್ರತಿ ವರ್ಷ ಒಬ್ಬ ವ್ಯಕ್ತಿ ಕನಿಷ್ಟ ಮೂರು ಬಾರಿ ರಕ್ತದಾನ ಮಾಡುವ ಸಂಕಲ್ಪ ಮಾಡಬೇಕು. ರಾಜ್ಯದಲ್ಲಿ ಅತಿ ಹೆಚ್ಚು ರಕ್ತದಾನ ಮಾಡುವುದರಲ್ಲಿ ಮಂಡ್ಯ ಹೆಚ್ಚು ರಕ್ತದಾನ ಮಾಡುವ ಜಿಲ್ಲೆಯಾಗಿ ವರದಿಯಾಗಿದೆ. ಮಂಡ್ಯ ಮಿಮ್ಸ್ನಲ್ಲಿ ಪ್ರತಿ ವರ್ಷ 1200 ರಿಂದ 1500 ಯೂನಿಟ್ ರಕ್ತದ ಅವಶ್ಯಕತೆ ಇದೆ. ತುರ್ತು ಸಂದರ್ಭದಲ್ಲಿ ಅಪೌಷ್ಟಿಕಾಂಶ ಹಾಗೂ ಹೆರಿಗೆ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಇರುತ್ತದೆ. ಅದಕ್ಕಾಗಿ ರಕ್ತದಾನ ಮಾಡುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾವೇರಿ ತಾಂತ್ರಿಕ ಶಿಕ್ಷಣ ಮಹಾವಿದ್ಯಾಲಯದ ಅಧ್ಯಕ್ಷ ಡಾ.ಎಚ್.ಪಿ.ರಾಜು, ಕಾರ್ಯದರ್ಶಿ ಪ್ರೊ.ಟಿ.ನಾಗೇಂದ್ರ, ಪ್ರಾಂಶುಪಾಲ ಪ್ರೊ.ಎ.ಎಸ್.ಶ್ರೀಕಂಠಪ್ಪ, ಪ್ರೊ.ಸಿ.ಎಂ.ಸವಿತಾ, ರೆಡ್‌ಕ್ರಾಸ್ ಸಂಸ್ಥೆ ಜಂಟಿ ಕಾರ್ಯದರ್ಶಿ ರಂಗಸ್ವಾಮಿ, ನಿರ್ದೇಶಕ ಕೆ.ಟಿ.ಹನುಮಂತು ಇತರರಿದ್ದರು.