ಮಂಡ್ಯ: ಭಾರತದಲ್ಲಿ ಪ್ರತಿ ವರ್ಷ 5 ಕೋಟಿ ಯೂನಿಟ್ ರಕ್ತದ ಅವಶ್ಯವಿದೆ. ಆದರೆ ಅಗತ್ಯಕ್ಕೆ ಅನುಗುಣವಾಗಿ ರಕ್ತ ಸಂಗ್ರಹ ಲಭ್ಯವಾಗುತ್ತಿಲ್ಲ ಎಂದು ಕೃಷಿಕ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ.ಹನುಮಂತು ಆತಂಕ ವ್ಯಕ್ತಪಡಿಸಿದರು.
ತಾಲೂಕಿನ ಕೀಲಾರ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಘಟಕ, ಕೃಷಿಕ ಲಯನ್ಸ್ ಸಂಸ್ಥೆ, ಸಕ್ಕರೆನಾಡು ಲಯನ್ಸ್ ಸಂಸ್ಥೆ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ಕೆ.ವಿ.ಶಂಕರಗೌಡ ಯುವಜನ ಸಂಘ, ಕ್ಷೀರಸಾಗರ ಮಿತ್ರಕೂಟ, ಕೆವಿಎಸ್‌ಎಸ್ ಕೀಲಾರ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಸಹಯೋಗದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ರಕ್ತದಾನ ಶಿಬಿರ ಹಾಗೂ ಹೆಚ್ಚು ಬಾರಿ ರಕ್ತದಾನ ಮಾಡಿದವರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಪ್ರಸ್ತುತ ದೇಶದಲ್ಲಿ 2.5 ಕೋಟಿ ಯೂನಿಟ್ ಮಾತ್ರ ರಕ್ತ ಸಕಾಲಕ್ಕೆ ಲಭ್ಯವಾಗುತ್ತದೆ. ರಕ್ತದಾನವೆಂದರೆ ಅದು ಜೀವದಾನ. ಇದಕ್ಕೆ ಬೇರೆ ಯಾವುದೇ ಪರ್ಯಾಯ ಮಾರ್ಗವಿಲ್ಲ. ದೇಶದಲ್ಲಿ ಪ್ರತಿ 2 ಸೆಕೆಂಡ್‌ಗೆ ಯಾರಿಗಾದರೂ ರಕ್ತದ ಅಗತ್ಯವಿರುತ್ತದೆ. ಪ್ರತಿ ವರ್ಷ ಭಾರತದಲ್ಲಿ ಅಂದಾಜು 10 ಲಕ್ಷ ಜನರಲ್ಲಿ ಕ್ಯಾನ್ಸರ್ ಪತ್ತೆಯಾಗುತ್ತದೆ. ಈ ಜನರ ಪೈಕಿ ಹೆಚ್ಚಿನವರಿಗೆ ಕೆಲವೊಮ್ಮೆ ಆಗಾಗ, ದಿನನಿತ್ಯ, ಕಿಮೋಥೆರಪಿ ಮಾಡುವಾಗ ರಕ್ತ ಸರಬರಾಜು ಮಾಡಲೇಬೇಕಾಗುತ್ತದೆ ಎಂದರು.
ರಾಜ್ಯದ ಅಕ್ಕಿ ಆಲೂರು ’ರಕ್ತದಾನಿಗಳ ತವರೂರಾಗಿದೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನಲ್ಲಿರುವ ಈ ಗ್ರಾಮವು ರಕ್ತದಾನಿಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ಸುಮಾರು 600ಕ್ಕೂ ಹೆಚ್ಚು ಗ್ರಾಮಸ್ಥರು ನೋಂದಣಿ ಮಾಡಿಕೊಂಡಿದ್ದು, ನಿಯಮಿತವಾಗಿ ರಕ್ತದಾನ ಮಾಡುತ್ತಿದ್ದಾರೆ. ಇಂತಹ ಮಾದರಿ ಗ್ರಾಮಗಳು ಪ್ರತಿ ಹೋಬಳಿ, ತಾಲೂಕು ಜಿಲ್ಲೆಗಳಲ್ಲಿ ಇರುವಂತಾಗಬೇಕು ಎಂದು ಮಾಹಿತಿ ನೀಡಿದರು.
ಕೃಷಿಕ ಲಯನ್ಸ್ ಸಂಸ್ಥೆಯ ಕಾರ್ಯದರ್ಶಿ ಕೆ.ಪಿ.ವೀರಪ್ಪ, ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಅರ್ಜುನ್‌ಕುಮಾರ್, ದಂತ ವೈದ್ಯಾಧಿಕಾರಿ ಡಾ.ಚಂದ್ರಶೇಖರ್, ಅರವಳಿಕೆ ತಜ್ಞ ಡಾ.ಆನಂದ್, ಮಕ್ಕಳ ತಜ್ಞ ಡಾ.ಶಿವಪ್ರಸಾದ್, ಹಿರಿಯ ವೈದ್ಯಾಧಿಕಾರಿ ಡಾ.ಗಣೇಶ್, ನರ್ಸಿಂಗ್ ವಿಭಾಗದ ಜಗದೀಶ್, ಮೇರಿ ಲಿಡಿಯ, ಶಾಂತರಾಜು, ಲ್ಯಾಬ್ ಟೆಕ್ನಿಷಿಯನ್ ವಿಠಲ, ಕೆವಿಎಸ್‌ಎಸ್ ಸಂಘಟನೆಯ ಸುರೇಶ್, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ದೀಕ್ಷಿತಾ, ಕೆವಿಎಸ್ ಯುವಜನ ಸಂಘದ ಕೆ.ಆರ್.ಶಂಕರ್, ಕ್ಷೀರಸಾಗರ ಮಿತ್ರಕೂಟದ ಕೀಲಾರ ಕೃಷ್ಣೇಗೌಡ, ರಕ್ತ ನಿಧಿ ಕೇಂದ್ರದ ವೈದ್ಯೆ ಡಾ.ಶ್ರೀನಿಧಿ, ಜ್ಞಾನರಾಜ್ ಇತರರಿದ್ದರು.