ಕುಶಾಲನಗರ:
ರಕ್ತದಾನದ ಮಹತ್ವ ಹಾಗೂ ರಕ್ತದಾನದಿಂದ ಆಗುವ ಪ್ರಯೋಜನಗಳ ಕುರಿತು ಗ್ರಾಮೀಣ ಜನರಿಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ ಎಂದು ಜಿಲ್ಲಾ ರಕ್ತ ನಿಧಿ ಘಟಕದ ಮುಖ್ಯಸ್ಥ ಡಾ.ಕರುಂಬಯ್ಯ ಹೇಳಿದರು. ಕೂಡಿಗೆಯ ಶ್ರೀ ರಾಮೇಶ್ವರ ಕೂಡುಮಂಗಳೂರು ಸಹಕಾರ ಭವನದಲ್ಲಿ ಶುಕ್ರವಾರ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್, ಮಡಿಕೇರಿ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಘಟಕ, ಕೂಡಿಗೆ ವಿಎಸ್‌ಎಸ್‌ಎನ್, ಕೂಡಿಗೆ ಗ್ರಾಮ ಪಂಚಾಯಿತಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.
ಒಬ್ಬರು ನೀಡುವ ರಕ್ತ ಮೂವರ ಜೀವವನ್ನು ಉಳಿಸುತ್ತದೆ. ರಕ್ತದಾನದ ಬಗ್ಗೆ ಗ್ರಾಮೀಣ ಜನರಲ್ಲಿ ಇರುವ ಮೌಢ್ಯವನ್ನು ಹೋಗಲಾಡಿಸಿ ಅವರಲ್ಲಿ ಜಾಗೃತಿ ಮೂಡಿಸಬೇಕು. ಪ್ರತೀ ಸಂಘ ಸಂಸ್ಥೆಗಳು ವರ್ಷಕ್ಕೊಮ್ಮೆ ಇಂಥ ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳಬೇಕು. ರಕ್ತದಾನಿಗಳು ಯಾವುದೇ ಫಲಾಪೇಕ್ಷೆಗಳಿಲ್ಲದೇ ಸ್ವಯಂ ಪ್ರೇರಿತರಾಗಿ ರಕ್ತ ನೀಡುವಂತಾಗಬೇಕು. 18 ರಿಂದ 60 ರ ವಯೋಮಿತಿಯವರು ವರ್ಷಕ್ಕೆ 4 ಬಾರಿ ರಕ್ತದಾನ ಮಾಡಬಹುದು. ರಕ್ತ ನೀಡಿದಲ್ಲಿ ಬಿಪಿ, ಶುಗರ್, ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬರುತ್ತದೆ ಎಂದರು.
ಕೂಡಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಕೆ. ಹೇಮಂತಕುಮಾರ್ ಮಾತನಾಡಿ, ದಾನಗಳಲ್ಲಿ ಶ್ರೇಷ್ಠ ದಾನವಾದ ರಕ್ತದಾನ ಮಾಡುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಲಹಾ ಸಮಿತಿ ಸದಸ್ಯ ಎಂ.ಡಿ. ರಂಗಸ್ವಾಮಿ ಮಾತನಾಡಿ, ಕೇವಲ ಒಡಹುಟ್ಟಿದವರು ರಕ್ತಸಂಬAಧಿಗಳಲ್ಲ. ನಾವು ನೀಡಿದ ರಕ್ತವನ್ನು ಪಡೆಯುವವರೂ ನಮಗರಿವಲ್ಲದಂತೆ ರಕ್ತಸಂಬAಧಿಗಳಾಗುತ್ತಾರೆ. ಆದ್ದರಿಂದ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಸಂಘ ಸಂಸ್ಥೆಗಳು ಇಂತಹ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ದೀಪಿಕಾ ಮೂರ್ತಿ, ಕೂಡಿಗೆ ಸಹಕಾರ ಸಂಘದ ನಿರ್ದೇಶಕರಾದ ಕೃಷ್ಣ, ಕುಮಾರ್, ಕೃಷ್ಣೇಗೌಡ, ಜಿಲ್ಲಾ ರಕ್ತನಿಧಿ ಘಟಕದ ಶುಶ್ರೂಷಕಿಯರಾದ ಸೌಮ್ಯ, ಜೂಲಿಯೇಟ್ ಕ್ರಾಸ್ತಾ, ಪಂಚಲಿAಗೇಶ್ವರ, ಪವಿತ್ರ, ಪೂರ್ಣಿಮಾ, ವಿವೇಕಾನಂದ ಯೂತ್ ಮೂವ್ ಮೆಂಟ್‌ನ ಸಹಾಯಕ ವ್ಯವಸ್ಥಾಪಕ ಭೋರಪ್ಪ, ಹೇಮಂತ್ ಹಾಗೂ ಮಡಿಕೇರಿ ವೈದ್ಯಕೀಯ ಆಸ್ಪತ್ರೆಯ ತರಬೇತಿ ವೈದ್ಯ ಸಿಬ್ಬಂದಿ ಇದ್ದರು. .
ಶಿಬಿರದಲ್ಲಿ 70 ಕ್ಕೂ ಅಧಿಕ ಜನರು ರಕ್ತದಾನ ಮಾಡಿದರು.