ಮಡಿಕೇರಿ:
ಮನುಷ್ಯನ ದೇಹದಲ್ಲಿ ಪ್ರಮುಖ ಅಂಶವಾಗಿರುವ ರಕ್ತ ಕೂಡ ಔಷಧೀಯ ಗುಣ ಹೊಂದಿರುವುದರಿAದ ಇಂದಿನ ಕಾಲದಲ್ಲಿ ಜೀವಸಂರಕ್ಷಕ ರಕ್ತಕ್ಕೆ ಬೇಡಿಕೆಯ ಪ್ರಮಾಣ ಹೆಚ್ಚುತ್ತಲೇ ಇದೆ. ಈ ನಿಟ್ಟಿನಲ್ಲಿ ರಕ್ತ ಸಂಗ್ರಹಣೆ ಮೂಲಕ ಕೊಡಗಿನ ಆಸ್ಪತ್ರೆಗಳಲ್ಲಿ ರಕ್ತದ ಸರಬರಾಜು ಅಧಿಕವಾಗಬೇಕಾಗಿದೆ ಎಂದು ಜಿಲ್ಲಾ ಸಹಾಯಕ ಔಷಧಿ ನಿಯಂತ್ರಕ ಅಧಿಕಾರಿ ಗುರುನಾಥ್ ಹೇಳಿದರು. ಕೊಡಗು ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘದ ವತಿಯಿಂದ ನಗರದ ರೋಟರಿ ಸಭಾಂಗಣದಲ್ಲಿ, ರಾಷ್ಟ್ರೀಯ ಔಷಧಿ ವ್ಯಾಪಾರಸ್ಥರ ಸಂಘಕ್ಕೆ 50 ವರ್ಷಗಳ ಸಂಭ್ರಮದ ಹಿನ್ನೆಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ರಕ್ತಸಂಗ್ರಹ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ರಕ್ತದಾನವನ್ನು ಯಾರೂ ವೃತ್ತಿಯನ್ನಾಗಿ ಪರಿವರ್ತಿಸಿಕೊಳ್ಳಬಾರದು. ರಕ್ತವನ್ನು ದಾನ ನೀಡುವುದು ಮತ್ತೋರ್ವರ ಜೀವ ಉಳಿಸುವ ಮಾನವೀಯ ಕಾರ್ಯ ಎಂದು ದಾನಿಗಳು ತಿಳಿದುಕೊಳ್ಳಬೇಕು. ಪ್ರತೀಯೋರ್ವ ಆರೋಗ್ಯವಂತ ವ್ಯಕ್ತಿ 3 ತಿಂಗಳಿಗೊಮ್ಮೆ ರಕ್ತ ನೀಡಬಹುದಾಗಿದೆ. ಕೊಡಗಿನ ಜಿಲ್ಲಾಸ್ಪತ್ರೆಯ ರಕ್ತ ನಿಧಿ ಕೇಂದ್ರದಲ್ಲಿ ಹೆಚ್ಚುತ್ತಿರುವ ರಕ್ತದ ಬೇಡಿಕೆಗೆ ಅನುಗುಣವಾಗಿ ಶಿಬಿರಗಳ ಮೂಲಕ ರಕ್ತದ ಸಂಗ್ರಹ ಕೂಡ ಹೆಚ್ಚಾಗಬೇಕಿದೆ ಎಂದರು.
ರೆಡ್ ಕ್ರಾಸ್ ಜಿಲ್ಲಾ ಉಪಾಧ್ಯಕ್ಷ ಅನಿಲ್ ಹೆಚ್.ಟಿ. ಮಾತನಾಡಿ, ಎಐ ನಂಥ ಅತ್ಯಾಧುನಿಕ ತಂತ್ರಜ್ಞಾನಗಳು ಎಷ್ಟೇ ಬಂದರೂ ಮಾನವನ ರಕ್ತಕ್ಕೆ ಪರ್ಯಾಯ ವ್ಯವಸ್ಥೆ ಕಂಡುಹಿಡಿಯಲು ಅಸಾಧ್ಯವಾಗಿದೆ. ಕೊಡಗು ಜಿಲ್ಲೆಯ ರಕ್ತ ನಿಧಿ ಕೇಂದ್ರಕ್ಕೆ ಮಾಸಿಕವಾಗಿ 500 ಯೂನಿಟ್ ರಕ್ತದ ಅಗತ್ಯತೆಯಿದ್ದು, ಮಾಸಿಕವಾಗಿ ಕನಿಷ್ಟ 10 ರಕ್ತಸಂಗ್ರಹಣೆಯ ಶಿಬಿರಗಳ ಅಗತ್ಯ ಕಂಡುಬAದಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ವಿವಿಧ ಸಂಘಸAಸ್ಥೆಗಳು ರಕ್ತದಾನ ಶಿಬಿರಗಳನ್ನು ಆಯೋಜಿಸುವ ಅಗತ್ಯವಿದೆ ಎಂದರು.
ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಗಾಯತ್ರಿ ಮಾತನಾಡಿ, ರಕ್ತದಾನಿಗಳಲ್ಲಿ ರಕ್ತ ನೀಡಿದ 24 ಗಂಟೆಗಳಲ್ಲಿಯೇ ಮತ್ತೆ ಹೊಸ ರಕ್ತದ ಸಂಚಾರ ಉಂಟಾಗಲಿದೆ. ರಕ್ತವನ್ನು ದಾನವಾಗಿ ನೀಡಲು ಯಾವುದೇ ಹಿಂಜರಿಕೆ ಬೇಕಾಗಿಲ್ಲ ಎಂದು ಹೇಳಿದರು.
ರಾಷ್ಟ್ರೀಯ ಔಷಧಿ ವ್ಯಾಪಾರಸ್ಥರ ಸಂಘದ ಸಂಘಟನಾ ಕಾರ್ಯದರ್ಶಿ ಅಂಬೆಕಲ್ ಜೀವನ್ ಕುಶಾಲಪ್ಪ ಮಾತನಾಡಿ, ರಾಷ್ಟ್ರವ್ಯಾಪಿ 12.50 ಲಕ್ಷ ಔಷಧಿ ವ್ಯಾಪಾರಸ್ಥರು ಮತ್ತು ಕರ್ನಾಟಕದಲ್ಲಿ 26 ಸಾವಿರ ಔಷಧಿ ವ್ಯಾಪಾರಸ್ಥರಿದ್ದಾರೆ. ದೇಶದ ಪ್ರಬಲ ಸಂಘಟನೆಯಾಗಿರುವ ಔಷಧಿ ವ್ಯಾಪಾರಿಗಳ ಸಂಘ ಇದೀಗ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ. ಈ ಹಿನ್ನೆಲೆಯಲ್ಲಿ ಇಡೀ ದೇಶದಲ್ಲಿ ಔಷಧಿ ವ್ಯಾಪಾರಸ್ಥರ ಸಂಘದಿAದ ರಕ್ತದಾನ ಶಿಬಿರ ಆಯೋಜಿಸಲ್ಪಟ್ಟಿದೆ. ಇದು ಅತ್ಯಧಿಕ ಪ್ರಮಾಣದಲ್ಲಿ ರಕ್ತ ಸಂಗ್ರಹದ ಗಿನ್ನೀಸ್ ದಾಖಲೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದರು.
ಔಷಧಿ ವ್ಯಾಪಾರಸ್ಥರ ಸಂಘದ ಮಾಹಿತಿಯುಳ್ಳ ನೂತನ ಆ್ಯಪ್ ಅನ್ನು ಇದೇ ವೇಳೆ ಲೋಕಾರ್ಪಣೆ ಮಾಡಲಾಯಿತು. ಸಮಾರಂಭದಲ್ಲಿ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ಜಂಟಿ ಕಾರ್ಯದರ್ಶಿ ವಸಂತ್ ಕುಮಾರ್, ಉಪಾಧ್ಯಕ್ಷ ವಿನೋದ್ ಅಂಬೆಕಲ್, ಖಜಾಂಚಿ ಪ್ರಸಾದ್ ಗೌಡ, ನಿರ್ದೇಶಕ ತಿಲಕ್ ಸೇರಿದಂತೆ ಇತರರು ಇದ್ದರು. ಔಷಧಿ ವ್ಯಾಪಾರಿಗಳ ಸಂಘದ ಸದಸ್ಯರು ರಕ್ತದಾನ ಮಾಡಿದರು.