ಜಿಲ್ಲೆ

ತುಮಕೂರು ನಗರ ಪ್ರವೇಶಕ್ಕೆ ದಿಗ್ಬಂಧನ, ಚೆಕ್‌ಪೋಸ್ಟ್‌ಗಳಲ್ಲಿ ಹೆಚ್ಚಿನ ನಿಗಾ

Tumakuru

ತುಮಕೂರು: ಕರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹೊರ ರಾಜ್ಯ, ಜಿಲ್ಲೆಗಳಿಂದ ಆಗಮಿಸವವರ ಮೇಲೆ ಹದ್ದಿನ ಕಣ್ಣಿಡಲು ನಿರ್ಧರಿಸಿದೆ.

ನಗರಕ್ಕೆ ದಿಗ್ಬಂಧನ ಹಾಕಲಾಗಿದ್ದು, ನಗರಕ್ಕೆ ಬರುವ ನಾಲ್ಕು ರಸ್ತೆಗಳಲ್ಲಿ ಚೆಕ್‌ಪೋಸ್ಟ್ ಗಳನ್ನು ಸ್ಥಾಪಿಸಲಾಗಿದೆ, ರಿಂಗ್ ರಸ್ತೆಗಳ ಮೂಲಕ ವಾಹನಗಳು ಸಂಚರಿಸಲು ಅವಕಾಶ ನೀಡಲಾಗಿದ್ದು ನಗರದೊಳಗೆ ಓಡಾಟದ ಮೇಲೆ ನಿಗಾವಹಿಸಿದೆ. ಭಾನುವಾರ ಬೆಳಗ್ಗೆಯೇ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಖುದ್ದು ಚೆಕ್‌ಪೋಸ್ಟ್‌ಗಳಿಗೆ ತೆರಳಿ ಪರಿಶೀಲಿಸಿದರು.

ಚೆಕ್‌ಪೋಸ್ಟ್‌ಗಳಲ್ಲಿ ಕಂದಾಯ, ಆರೋಗ್ಯ ಹಾಗೂ ಪೊಲೀಸ್ ಇಲಾಖೆಯ ತಲಾ ಇಬ್ಬರು ಸಿಬ್ಬಂದಿ 24*7 ಗಂಟೆಯೂ 3 ಪಾಳಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಹೊರಗಡೆಯಿಂದ ತುಮಕೂರು ನಗರಕ್ಕೆ ಪ್ರವೇಶಿಸುವ ವಾಹನ, ವ್ಯಕ್ತಿಗಳನ್ನು ತಪಾಸಣೆ ಮಾಡಲಾಗುವುದು. ತಪಾಸಣೆಯಲ್ಲಿ ಆರೋಗ್ಯ ಪರಿಸ್ಥಿತಿ ಆಧರಿಸಿ ಹೋಂ ಕ್ವಾರಂಟೈನ್ ಅಥವಾ ಸಾಂಸ್ಥಿಕ ಕ್ವಾರಂಟೈನ್‌ಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಡಿಸಿ ತಿಳಿಸಿದರು. ನಗರಕ್ಕೆ ಬರುವ ಎಲ್ಲ ವ್ಯಕ್ತಿ, ವಾಹನಗಳನ್ನು ತಪಾಸಣೆ ನಡೆಸುವಂತೆ ಚೆಕ್‌ಪೋಸ್ಟ್ ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕ ಡಾ.ಕೆ.ವಂಶಿಕೃಷ್ಣ ತಿಳಿಸಿದರು.

ನಗರವಾಸಿಗಳಿಗೆ ನಿಯಂತ್ರಣವಿಲ್ಲ!: ತುಮಕೂರು ನಗರದೊಳಗೆ ಸಾರ್ವಜನಿಕರ ಸಂಚಾರಕ್ಕೆ ನಿಬರ್ಂಧವಿಲ್ಲ. ಅನವಶ್ಯಕವಾಗಿ ಬೇರೆ ಕಡೆಯಿಂದ ನಗರ ಪ್ರವೇಶಿಸುವವರಿಗೆ ಮೇಲೆ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿದೆ.

ತುಮಕೂರು ನಗರ ಸಂಪರ್ಕಕ್ಕೆ ಹೊಸ ಮಾರ್ಗ!: ನಾಲ್ಕು ಚೆಕ್‌ಪೋಸ್ಟ್ ದಾಟಿಯೇ ನಗರ ಪ್ರವೇಶಿಸಬೇಕು. ಬೆಂಗಳೂರಿನಿಂದ ಬರುವವರು ರಿಂಗ್ ರಸ್ತೆ ಮೂಲಕ ನಗರ ಪ್ರವೇಶಿಸಬೇಕು. ಕುಣಿಗಲ್ ಕಡೆಯಿಂದ ಬರುವವರು ಕುಣಿಗಲ್ ಜಂಕ್ಷನ್ ಮೂಲಕ, ಗುಬ್ಬಿ ಕಡೆಯಿಂದ ಬರುವವರು ರಿಂಗ್ ರೋಡ್ ಜಂಕ್ಷನ್ ಮೂಲಕ, ಶಿರಾದಿಂದ ಬರುವವರು ಲಿಂಗಾಪುರ ಅಂಡರ್ ಪಾಸ್-ಹಳೇ ಎನ್‌ಎಚ್-4 ರಸ್ತೆ ಮೂಲಕ ಅಥವಾ ಅಂತರಸನಹಳ್ಳಿ ಬ್ರಿಡ್ಜ್ ಸರ್ವೀಸ್ ರಸ್ತೆ ಮೂಲಕ ನಗರ ಪ್ರವೇಶಿಸಬೇಕು. ಇನ್ನು ತುಮಕೂರು ನಗರದಿಂದ ಬೆಂಗಳೂರಿಗೆ ಹೋಗುವವರು ಎನ್‌ಎಚ್ 48 ರಸ್ತೆ ಮತ್ತು ಗುಬ್ಬಿ ರಿಂಗ್ ರಸ್ತೆ ಮೂಲಕ ಹೋಗಬಹುದು. ಶಿರಾಗೆ ತೆರಳುವವರು ಹಳೇ ಎನ್‌ಎಚ್ 4 ರಸ್ತೆ ಮೂಲಕ ರಾಷ್ಟ್ರೀಯ ಹೆದ್ದಾರಿ48ಕ್ಕೆ ಹೋಗಬಹುದು.