ಜಿಲ್ಲೆ

ಶಾಸಕರು ಮೊದಲು ಶಿಷ್ಟಾಚಾರ ಅರಿಯಲಿ

Davangere - Desk - Shobha Krishna Gowda

ಹರಿಹರ: ಶಾಸಕ ಬಿ.ಪಿ.ಹರೀಶ್ ಅವರು ಶಿಷ್ಟಾಚಾರ ನೆಪದಲ್ಲಿ ಸರ್ಕಾರಿ ನೌಕರರನ್ನು ಕೀಳಾಗಿ ಕಾಣುವ ವರ್ತನೆಯನ್ನು ತಾಲೂಕು ಬ್ಲಾಕ್ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ ಎಂದು ಅಧ್ಯಕ್ಷ ಎಲ್.ಬಿ.ಹನುಮಂತಪ್ಪ ಹೇಳಿದರು.

ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚಿಗೆ ತಾಪಂ ಸಾಮಾನ್ಯ ಸಭೆಯ ಸೂಚನಾ ಪತ್ರದಲ್ಲಿ ಸಂಸದರ ಹೆಸರನ್ನು ಮೊದಲಿಗೆ ಹಾಕಿರುವುದನ್ನು ನೆಪವಾಗಿಟ್ಟುಕೊಂಡು ಅಲ್ಪ ಸಂಖ್ಯಾತ ಅಧಿಕಾರಿಗಳನ್ನು ಸಭೆಯಲ್ಲಿ ತರಾಟೆಗೆ ತೆಗೆದುಕೊಂಡಿರುವುದು ಕೀಳು ಮನಸ್ಥಿತಿ ತೋರಿಸುತ್ತದೆ ಎಂದು ಟೀಕಿಸಿದರು.

ಅಧಿಕಾರಿಗಳು ಶಿಷ್ಟಾಚಾರದ ಪ್ರಕಾರವೇ ನಡೆದುಕೊಂಡಿದ್ದಾರೆ. ಸಂಸದರು ಇಡೀ ಲೋಕಸಭಾ ಕ್ಷೇತ್ರ ಪ್ರತಿನಿಧಿಸುತ್ತಾರೆ ಎಂಬುದನ್ನು ಮರೆಯಬಾರದು. ಶಾಸಕರು ಮೊದಲು ಶಿಷ್ಟಾಚಾರದ ನಿಯಮ ತಿಳಿದುಕೊಳ್ಳಬೇಕು ಎಂದರು.

ಮಲೇಬೆನ್ನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬಿದ್ ಅಲಿ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಪಾಪರ್ ಆಗಿದೆ ಎಂದು ಆರೋಪ ಮಾಡಿರುವ ಶಾಸಕರು, ಕ್ಷೇತ್ರವನ್ನು ಮರೆತು ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಯಲ್ಲಿ ತೊಡಗಿಸಿಕೊಂಡಿದ್ದು, ಹರಿಹರಕ್ಕೆ ಅತಿಥಿ ಶಾಸಕರಾಗಿದ್ದಾರೆ ಎಂದು ತಿರುಗೇಟು ನೀಡಿದರು.

ತಾಪಂ ಕೆಡಿಪಿ ಸದಸ್ಯ ಗೋವಿನಹಾಳು ರಾಜಣ್ಣ ಮಾತನಾಡಿ, ಕ್ಷೇತ್ರದ ಅಭಿವೃದ್ದಿ ಬಗ್ಗೆ ಚಿಂತನೆ ಮಾಡುವವರು ಜಿಲ್ಲಾ ಉಸ್ತುವಾರಿ ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅನುದಾನ ತರಲು ಪ್ರಯತ್ನ ಮಾಡಬೇಕು. ಆದರೆ, ದಿನ ಬೆಳಗಾದರೆ ಅವರನ್ನು ನಿಂದಿಸುವುದನ್ನೇ ಕಾಯಕ ಮಾಡಿಕೊಂಡಿರುವ ಶಾಸಕ ಹರೀಶ್ ಅವರಿಗೆ ಕಾಂಗ್ರೆಸ್ ಸರ್ಕಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ನಗರಸಭಾ ಸದಸ್ಯರಾದ ಸೈಯದ್ ಅಲೀಂ, ಕೆ.ಬಿ ರಾಜಶೇಖರ್, ಕೆಡಿಪಿ ಸದಸ್ಯ ಬಿ.ಮಲ್ಲೇಶ್, ಆರೋಗ್ಯ ರಕ್ಷಾ ಸಮಿತಿ ಸದಸ್ಯ ವಿಜಯ್ಕುಮಾರ್, ಮಲೇಬೆನ್ನೂರು ಕಾಂಗ್ರೆಸ್ ಮುಖಂಡ ಸೈಯದ್ ಜಾಕೀರ್ ಸಾಬ್, ಸೇವಾದಳ ಕಾರ್ಯದರ್ಶಿ ಜಿ.ವಿ ಪ್ರವೀಣ್, ಭಾನುವಳ್ಳಿ ದಾದಾಪೀರ್, ಕೊಟ್ರೇಶ್, ಹನುಮಂತ ಇತರರಿದ್ದರು.