ಹಳೆಯಂಗಡಿ: ಕಿನ್ನಿಗೋಳಿ ಮತ್ತು ಬಜ್ಪೆ ಪಟ್ಟಣ ಪಂಚಾಯಿತಿ ಚುನಾವಣೆ ಶೀಘ್ರದಲ್ಲಿ ನಡೆಯಲಿರುವುದರಿಂದ ಕಾರ್ಯಕರ್ತರು ಸಜ್ಜಾಗಿ ಕಾಂಗ್ರೆಸ್ ಪಕ್ಷಕ್ಕೆ ಗೆಲುವು ತರಲು ಶ್ರಮಿಸಬೇಕು. ಇಲ್ಲಿ ಪ್ರಥಮ ಆಡಳಿತ ಕಾಂಗ್ರೆಸ್ ಪಕ್ಷ ನಡೆಸಬೇಕು ಎಂಬ ದಿಟ್ಟ ನಿರ್ಧಾರದೊಂದಿಗೆ ಚುನಾವಣೆ ಎದುರಿಸಬೇಕಾಗಿದೆ. ಈ ಬಗ್ಗೆ ಎಲ್ಲ ಕಾರ್ಯಕರ್ತರು ಬೂತ್‌ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಿ ಅಧಿಕಾರಕ್ಕೆ ತರುವಲ್ಲಿ ಶ್ರಮಿಸಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ಎಂ.ರೈ ಹೇಳಿದರು.
ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಮಾಸಿಕ ಸಭೆಯಲ್ಲಿ ಮಾತನಾಡಿ, ಈ ಚುನಾವಣೆಯೊಂದಿಗೆ ಜಿಪಂ ಮತ್ತು ತಾಪಂ ಚುನಾವಣೆ ನಡೆಯಲಿರುವುದರಿಂದ ಈ ಬಗ್ಗೆ ಕಾರ್ಯತತ್ಪರರಾಗಬೇಕು ಎಂದರು.
ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ಸದಸ್ಯ ಎಚ್.ವಸಂತ ಬರ್ನಾಡ್, ಡಿಸಿಸಿ ಸದಸ್ಯ ಮೋನಪ್ಪ ಶೆಟ್ಟಿ ಎಕ್ಕಾರು, ಬ್ಲಾಕ್ ಉಪಾಧ್ಯಕ್ಷ ಹಸನಬ್ಬ ಬಾಳ, ನಾಯಕರಾದ ಗುರುರಾಜ್ ಎಸ್.ಪೂಜಾರಿ, ಟಿ.ಎಚ್.ಮಯ್ಯದಿ, ಪ್ರಮೋದ್ ಕುಮಾರ್, ಆಲ್ವಿನ್, ಬಿಜೆ ರಹಿಮ್ ಮೊದಲಾದವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಮಂಜುನಾಥ ಕಂಬಾರ ವಂದಿಸಿದರು.