ಹಗರಿಬೊಮ್ಮನಹಳ್ಳಿ: ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಇ) ಕಾರ್ಯದಿಂದ ಮುಕ್ತಿಗೊಳಿಸುವಂತೆ ಆಗ್ರಹಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕ ಗುರುವಾರ ಪಟ್ಟಣದ ತಹಸಿಲ್ ಕಚೇರಿಯಲ್ಲಿ ಉಪತಹಸೀಲ್ದಾರ್ ವಿಶ್ವೇಶ್ವರಯ್ಯಗೆ ಮನವಿ ಸಲ್ಲಿಸಿತು.
ಸಂಘದ ಕಾರ್ಯದರ್ಶಿ ಬಿ.ಕೊಟ್ರಪ್ಪ ಮಾತನಾಡಿ, ಶಿಕ್ಷಕರನ್ನು ಸರ್ಕಾರ ಬೂತ್ ಮಟ್ಟದ ಅಧಿಕಾರಿಯನ್ನಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿತ್ತು. ಆದರೆ ಶಾಲೆಗಳಲ್ಲಿ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಶಿಕ್ಷಕರನ್ನು ಬೋಧನೆಗೆ ಆದ್ಯತೆ ನೀಡುವ ಉದ್ದೇಶದಿಂದಾಗಿ ಬಿಎಲ್‌ಒ ಕಾರ್ಯದಿಂದ ಮುಕ್ತಿಗೊಳಿಸಬೇಕು. ಕಳೆದ ಬೇಸಿಗೆ ರಜೆಯಲ್ಲಿ 2023ರ ಏಪ್ರಿಲ್ 11ರಿಂದ ಮೇ 10ರವರೆಗೆ ಶಿಕ್ಷಕರು ಚುನಾವಣಾ ಕರ್ತವ್ಯ ನಿರ್ವಹಿಸಿದ್ದಾರೆ. ಗಳಿಕೆ ರಜಾ ಮಂಜೂರಾತಿಗೆ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿದರು.
ಸಂಘದ ಗೌರವಾಧ್ಯಕ್ಷ ಕೆ.ಮಲ್ಲಿಕಾರ್ಜುನ, ಅಧ್ಯಕ್ಷ ಹ್ಯಾಟಿ ಲೋಕಪ್ಪ, ಕೋಶಾಧ್ಯಕ್ಷ ಟಿ.ಸೋಮಶೇಖರ್, ಉಪಾಧ್ಯಕ್ಷ ದಾದೀಬಿ, ಸಹಕಾರ್ಯದರ್ಶಿ ಇಟಿಗಿ ಮಂಜುನಾಥ, ಶಿಕ್ಷಕರಾದ ಹುಳಿಮಜ್ಗಿ ಸುರೇಶ್, ಕೆ.ಹುಸೇನ್ ಸಾಹೇಬ್, ಶಾಂತಕುಮಾರಿ, ನಿರ್ಮಲಾ, ತಹಸಿಲ್ ನೌಕರ ಮಡ್ಡಿಕಟ್ಟಿ ನಾಗರಾಜ ಇದ್ದರು.