ಬೆಳಗಾವಿ:ಈ ಬಾರಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಬಿಡಿಸಿಸಿ) ಅಧಿಕಾರದ ಚುಕ್ಕಾಣಿ ಹಿಡಿಯಲು ಎಲ್ಲ ರೀತಿಯ ರಣತಂತ್ರಗಳನ್ನು ರೂಪಿಸಿದ್ದು, ನಮ್ಮ ಗೆಲುವಿನ ಓಟ ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬೆಮುಲ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ನಿಪ್ಪಾಣಿ ತಾಲೂಕಿನ ಪಿಕೆಪಿಎಸ್ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಿಡಿಸಿಸಿ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಒಟ್ಟು 16 ಸ್ಥಾನಗಳ ಪೈಕಿ 12 ಸ್ಥಾನಗಳಲ್ಲಿ ಗೆಲುವು ನಮ್ಮದಾಗಲಿದೆ. ಬ್ಯಾಂಕಿನ ಆಡಳಿತ ಚುಕ್ಕಾಣಿಯನ್ನು ನಾವೇ ಹಿಡಿಯುತ್ತೇವೆ. ಇದರಲ್ಲಿ ಯಾವ ಸಂಶಯವೂ ಇಲ್ಲ ಎಂದರು.
ನಿಪ್ಪಾಣಿ ಕ್ಷೇತ್ರದಲ್ಲಿ ಸುಮಾರು 119 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿದ್ದು, ಅವುಗಳಲ್ಲಿ ನಮ್ಮ ಪೆನೆಲ್ ಅಭ್ಯರ್ಥಿಯಾಗಿರುವ ಅಣ್ಣಾಸಾಹೇಬ ಜೊಲ್ಲೆಯವರಿ 72 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಬೆಂಬಲಿಸಿವೆ. ಇದರಿಂದ ಜೊಲ್ಲೆಯವರ ಆಯ್ಕೆಯು ಬಹುತೇಕ ಖಚಿತವಾಗಿದೆ. ಜಿಲ್ಲೆಯ ಎಲ್ಲ ಪಕ್ಷಗಳ ನಾಯಕರು ಪಕ್ಷ ಬೇಧ ಮರೆತು ಸಹಕಾರ ಮನೋಭಾವನೆಯಿಂದ ಒಗ್ಗಟ್ಟಿನಿಂದ ಚುನಾವಣೆಯನ್ನು ಎದುರಿಸುತ್ತಿದ್ದೇವೆ. ಎಲ್ಲ ಸ್ಥಾನಗಳನ್ನು ಗೆಲ್ಲಿಸಲು ನಾವುಗಳು ಪಣ ತೊಟ್ಟಿದ್ದೇವೆ ಎಂದು ತಿಳಿಸಿದರು.
ಮಾಜಿ ಸಂಸದ,ನಿಪ್ಪಾಣಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ರೈತರ ಸಂಸ್ಥೆಯಾಗಿರುವ ಡಿಸಿಸಿ ಬ್ಯಾಂಕಿನ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ರೈತರ ಸೇವೆಯೇ ನಮ್ಮ ಪ್ರಮುಖ ಗುರಿಯಾಗಿದೆ ಎಂದು ಹೇಳಿದರು.
ಬಿಡಿಸಿಸಿ ಅಧ್ಯಕ್ಷ ಅಪ್ಪಾಸಾಹೇಬ ಕುಲಗೋಡೆ, ನಿಪ್ಪಾಣಿ ಹಾಲ ಸಿದ್ದನಾಥ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಎಂ.ಕೆ.ಪಾಟೀಲ, ನಿಪ್ಪಾಣಿ ಮಾಜಿ ನಗರಾಧ್ಯಕ್ಷ ಜಯವಂತ ಪಾಟೀಲ, ನಿಪ್ಪಾಣಿ ಕ್ಷೇತ್ರದ ಪಿಕೆಪಿಎಸಅಧ್ಯಕ್ಷರು ಇತರರಿದ್ದರು.