ಜಿಲ್ಲೆ

ಅಂಧರ ಏಳ್ಗೆಗೆ ದುಡಿಯುವ ಸಂಸ್ಥೆಗೆ ನೆರವು, ಸಚಿವ ಸಂತೋಷ್ ಲಾಡ್ ಭರವಸೆ

Dharwada - Basavaraj Idli

ಹುಬ್ಬಳ್ಳಿ: ಅಂಗವಿಕಲರ ಏಳ್ಗೆಗಾಗಿ ಅವಿರತ ಶ್ರಮಿಸುತ್ತಿರುವ ಸಮರ್ಥನಂ ಅಂಗವಿಕಲರ ಸಂಸ್ಥೆಗೆ ಸರ್ಕಾರದಿಂದ ಅಗತ್ಯ ಸಹಕಾರ ನೀಡಲಾಗುವುದು, ಬಜೆಟ್ನಲ್ಲಿ ನೆರವು ನೀಡುವಂತೆ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸುವುದಾಗಿ ಕಾಮಿರ್ಕ ಸಚಿವ ಸಂತೋಷ ಲಾಡ್ ಭರವಸೆ ನೀಡಿದರು.

ಸಮರ್ಥನಂ ಅಂಗವಿಕಲರ ಸಂಸ್ಥೆಯು ಕ್ರಿಕೆಟ್ ಅಸೋಸಿಯೇಶನ್ ಫಾರ್ ದಿ ಬ್ಲೈಂಡ್ ಇನ್ ಇಂಡಿಯಾ (ಸಿಎಬಿಐ), ಕರ್ನಾಟಕ ಕ್ರಿಕೆಟ್ ಅಸೋಸಿಯೇಶನ್ ಫಾರ್ ದಿ ಬ್ಲೈಂಡ್ (ಸಿಎಬಿಐ) ಸಹಯೋಗದೊಂದಿಗೆ ಇಲ್ಲಿಯ ಇಂದಿರಾ ಗಾಜಿನ ಮನೆಯಲ್ಲಿ ಭಾನುವಾರ ಇಂಡಸ್ಇಂಡ್ ಬ್ಯಾಂಕ್ ಮಹಿಳಾ ರಾಷ್ಟ್ರೀಯ ಅಂಧರ ಟಿ20 ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ದಶಕದಿಂದ ಇಂತಹ ಕಾರ್ಯಕ್ರಮ ಮಾಡುತ್ತ ಬಂದಿರುವ ಸಂಸ್ಥೆಯು ಅಂಧ ಕ್ರೀಡಾಪಟುಗಳಿಗೆ ದೃಷ್ಟಿ ನೀಡುವ ಕೆಲಸ ಮಾಡುತ್ತಿದೆ. ಕ್ರೀಡಾಪಟುಗಳು ಮಾತ್ರ ಎಲ್ಲವನ್ನು ಸ್ಪೋಟಿರ್ವ್ ಆಗಿ ತೆಗೆದುಕೊಂಡು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುತ್ತಾರೆ. ಮಹಿಳಾ ಕ್ರೀಡಾಪಟುಗಳು ಅಂಧರಿರಬಹುದು. ಆದರೆ, ಅವರಲ್ಲಿ ಅನೇಕ ಆಲೋಚನೆಗಳಿವೆ. ಅವುಗಳಿಗೆ ನೀರೆರೆದು ಪೋಷಿಸುವ ಕೆಲಸ ಆಗಬೇಕು ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಾತನಾಡಿ, ತಾವು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಮರ್ಥನಂ ಸಂಸ್ಥೆಯು ಮೊದಲ ಬಾರಿ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿದ್ದೆ. ಅಗತ್ಯ ನೆರವನ್ನು ಸಹ ಸರ್ಕಾರದಿಂದ ನೀಡಲಾಗಿತ್ತು. ಮುಂದಿನ ದಿನಗಳಲ್ಲಿಯೂ ಸಹಕಾರ ನೀಡಲಾಗುವುದು ಎಂದರು.

ಕಣ್ಣಿದ್ದರೂ ಅನೇಕ ಜನರು ಆತ್ಮವಿಶ್ವಾಸ ಕಳೆದುಕೊಂಡಿರುತ್ತಾರೆ. ಅಂಧರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸವನ್ನು ಸಮರ್ಥನಂ ಉತ್ತಮವಾಗಿ ಮಾಡುತ್ತಿದೆ. ಕ್ರೀಡೆಗೆ ಮಹತ್ವ ಕಡಿಮೆ ಆಗುತ್ತಿರುವ ಸಂದರ್ಭದಲ್ಲಿ ಅಂಧರಿಗೆ ಕ್ರಿಕೆಟ್ ಆಯೋಜಿಸಿ ವಿಶೇಷತೆ ಮೆರೆದಿದೆ. ಇದೇ ರೀತಿ ದೇಶಿಯ ಆಟಗಳಿಗೂ ಮಹತ್ವ ನೀಡಿ ಎಂದು ಸಲಹೆ ನೀಡಿದರು.

ಕಿಮ್ಸ್ ನಿರ್ದೇಶಕ ಡಾ. ಎಸ್.ಎ್. ಕಮ್ಮಾರ ಮಾತನಾಡಿದರು.

ದೇಶದ 16 ರಾಜ್ಯಗಳ ತಂಡಗಳು ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದು, ಹುಬ್ಬಳ್ಳಿಯ ಜಿಮಖಾನಾ, ರೈಲ್ವೆ, ಬಿಡಿಕೆ ಮೈದಾನ ಹಾಗೂ ಧಾರವಾಡದ ಎಸ್ಡಿಎಂ ಮೈದಾನದಲ್ಲಿ ಲೀಗ್ ಪಂದ್ಯಗಳು ನಡೆಯಲಿವೆ. ಜ. 12ರಂದು ಜಿಮಖಾನಾ ಮೈದಾನದಲ್ಲಿ ಫೈನಲ್ ಪಂದ್ಯಗಳು ನಡೆಯಲಿವೆ ಎಂದು ಸಂಟಕರು ತಿಳಿಸಿದರು.

ಸಂಘಟನೆಯ ಶಿವಾನಂದ ಗುಂಜಾಳ, ಸಿಎಬಿಐ ಅಧ್ಯಕ್ಷ ಬುಸೆ ಗೌಡ, ಉದಯಕುಮಾರ ಬಾಗುನವರ, ವಾಸಂತಿ ಸವಣೂರ, ಇತರರು ಪಾಲ್ಗೊಂಡಿದ್ದರು.

ಮಮತಾ ಪ್ರಾರ್ಥನೆ ಹಾಡಿದರು. ಮೇಘಾ ನಿರೂಪಿಸಿದರು. ಸಮರ್ಥನಂ ಟ್ರಸ್ಟ್ ಚೇರ್ಮನ್ ಡಾ. ಮಹಾಂತೇಶ ಕಿವಡಸನ್ನವರ ಸ್ವಾಗತಿಸಿದರು.