ಜಿಲ್ಲೆ

ಅವಳಿನಗರದಲ್ಲಿ ಅಂಧರ ಕ್ರಿಕೆಟ್ 8ರಿಂದ

ಹುಬ್ಬಳ್ಳಿ: ಇಲ್ಲಿಯ ಸಮರ್ಥನಂ ಅಂಗವಿಕಲರ ಸಂಸ್ಥೆಯ ವತಿಯಿಂದ ಇಂಡಸ್ಇಂಡ್ ಬ್ಯಾಂಕ್ ಬೆಂಬಲದೊಂದಿಗೆ ಮಹಿಳಾ ರಾಷ್ಟ್ರೀಯ ಅಂಧರ ಟಿ20 ಕ್ರಿಕೆಟ್ ಪಂದ್ಯಾವಳಿಯನ್ನು ಜನೆವರಿ 8ರಿಂದ ಅವಳಿನಗರದ ವಿವಿಧ ಮೈದಾನಗಳಲ್ಲಿ ಏರ್ಪಡಿಸಲಾಗಿದೆ ಎಂದು ಸಮರ್ಥನಂ ಕ್ರೀಡಾ ವಿಭಾಗದ ಮುಖ್ಯಸ್ಥ ಧೀರಜ್ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ರಿಕೆಟ್ ಅಸೋಸಿಯೇಶನ್ ಫಾರ್ ಬ್ಲೈಂಡ್ ಇನ್ ಇಂಡಿಯಾ (ಸಿಎಬಿಐ), ಕರ್ನಾಟಕ ಕ್ರಿಕೆಟ್ ಅಸೋಸಿಯೇಶನ್ ಫಾರ್ ಬ್ಲೈಂಡ್ (ಸಿಎಬಿಐ) ಸಹಯೋಗ ನೀಡಿವೆ. ಒಟ್ಟು 16 ತಂಡಗಳು ಆಗಮಿಸಲಿದ್ದು, ನಾಲ್ಕು ಗುಂಪುಗಳಾಗಿ ವಿಂಗಡಿಸಿ ಹುಬ್ಬಳ್ಳಿಯ ಜಿಮಖಾನಾ ಮೈದಾನ, ರೈಲ್ವೆ, ಬಿಡಿಕೆ ಕ್ರಿಕೆಟ್ ಮೈದಾನ ಹಾಗೂ ಧಾರವಾಡದ ಎಸ್ಡಿಎಂ ಮೈದಾನದಲ್ಲಿ ಪಂದ್ಯಗಳನ್ನು ಆಡಿಸಲಾಗುತ್ತದೆ ಎಂದರು.

ಜ. 7ರಂದು ಸಂಜೆ 5ಕ್ಕೆ ನಗರದ ಇಂದಿರಾ ಗಾಜಿನ ಮನೆಯಲ್ಲಿ ಕ್ರೀಡಾಕೂಟಕ್ಕೆ ಜನಪ್ರತಿನಿಧಿಗಳು, ಗಣ್ಯರ ಸಮ್ಮುಖದಲ್ಲಿ ಚಾಲನೆ ನೀಡಲಾಗುತ್ತದೆ. 24 ಲೀಗ್ ಪಂದ್ಯಗಳು ನಡೆಯಲಿವೆ. ಜ. 12ರಂದು ವಿವೇಕಾನಂದ ಜಯಂತಿಯಂದು ಆಚರಿಸಲಾಗುವ ರಾಷ್ಟ್ರೀಯ ಯುವ ದಿನದಂದು ಫೈನಲ್ ಪಂದ್ಯಗಳು ನಡೆಯಲಿವೆ ಎಂದರು.

ಸಿಎಬಿಐ ಸಂಸ್ಥಾಪಕ ಸದಸ್ಯ ಉದಯಕುಮಾರ ಬಾಗುನವರ ಮಾತನಾಡಿ, 2012ರಲ್ಲಿ ಹುಬ್ಬಳ್ಳಿಯಲ್ಲಿ ಇಂತಹ ಕ್ರೀಡಾಕೂಟ ನಡೆದಿತ್ತು. ಇದೀಗ 4ನೇ ಆವೃತ್ತಿಯ ಮಹಿಳಾ ಕ್ರಿಕೆಟ್ ಪಂದ್ಯವನ್ನು ಅವಳಿನಗರದಲ್ಲಿ ಏರ್ಪಡಿಸಲಾಗುತ್ತಿದೆ. ಕರ್ನಾಟಕ, ಜಾರ್ಖಂಡ, ಒಡಿಶಾ, ತೆಲಂಗಾಣ, ಆಂಧ್ರಪ್ರದೇಶ, ಚಂಡಿಗಡ, ತಮಿಳುನಾಡು, ಪಶ್ಚಿಮ ಬಂಗಾಲ ರಾಜ್ಯದ ತಂಡಗಳು ಭಾಗವಹಿಸಲಿವೆ ಎಂದರು.

ಸಿಎಬಿಐ ಸದಸ್ಯ ಶಿವರಾಮ ದೇಶಪಾಂಡೆ, ಹುಬ್ಬಳ್ಳಿಯಲ್ಲಿ ಮಹಿಳಾ ಅಂಧರ ಕ್ರಿಕೆಟ್ ನಡೆಯುತ್ತಿರುವುದು ಸಂತಸದ ಸಂಗತಿ. ಇದಕ್ಕೆ ಸಂಸ್ಥೆಯಿಂದ ಎಲ್ಲ ಸಹಕಾರ ನೀಡಲಾಗುತ್ತಿದೆ ಎಂದರು.

ರೌಂಡ್ ಟೇಬಲ್ನ ಡಾ. ಸಂಜಯ, ಲೇಡಿಸ್ ಕ್ಲಬ್‌ನ ಅನೂಲಿ ವೆರ್ಣೇಕರ, ಕೃಷ್ಣ ಲಮಾಣಿ, ಇತರರು ಇದ್ದರು.