ಕನಕಗಿರಿಯಲ್ಲಿ ನಿರ್ಮಾಣವಾಗಿರುವ ರಂಭಾಪುರಿ ಸಮುದಾಯ ಭವನದ ಸಾಂಕೇತಿಕ ಉದ್ಘಾಟನೆಯಲ್ಲಿ ಹೋಮ ನೆರವೇರಿಸಲಾಯಿತು. ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು, ಪ್ರಮುಖರಾದ ಚನ್ನಬಸಯ್ಯ ಹಿರೇಮಠ, ಸಂಗಪ್ಪ ಸಜ್ಜನ, ಡಾ. ಗುರುಮೂರ್ತಿ, ಗುರುಸಿದ್ದಪ್ಪ ಹಾದಿಮನಿ, ಶೇಖರಗೌಡ ಪಾಟೀಲ ಇತರರಿದ್ದರು.  
ಜಿಲ್ಲೆ

ಸತ್ಕಾರ್ಯಗಳಿಂದ ಸಮಾಜಕ್ಕೆ ಹೆಚ್ಚಿನ ಬಲ

ಕನಕಗಿರಿ: ಸಮಾಜದಲ್ಲಿ ರಚನಾತ್ಮಕ ಮತ್ತು ಗುಣಾತ್ಮಕ ಕಾರ್ಯಗಳು ಯಾವಾಗಲೂ ನಡೆಯಬೇಕು. ಸತ್ಕಾರ್ಯಗಳಿಂದ ಸಮಾಜಕ್ಕೆ ಹೆಚ್ಚು ಬಲ ದೊರಕಲು ಸಾಧ್ಯ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

ಪಟ್ಟಣದಲ್ಲಿ ನಿರ್ಮಿಸಿರುವ ಶ್ರೀ ರಂಭಾಪುರಿ ಜಗದ್ಗುರು ಶಿವಾನಂದ ರಾಜೇಂದ್ರ ಸಮುದಾಯ ಭವನದ ವಾಸ್ತು ಶಾಂತಿ ಪೂಜೆ ನೆರವೇರಿಸಿದ ನಂತರ ನಡೆದ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಬುಧವಾರ ಆಶೀರ್ವಚನ ನೀಡಿದರು. ಕನಕಗಿರಿ ಇತಿಹಾಸದಲ್ಲಿ ಇದೊಂದು ಚಾರಿತ್ರಿಕ ದಿನವಾಗಿದೆ. ನಮ್ಮ ಹಾಗೂ ಭಕ್ತರ ಬಹು ದಿನಗಳ ಕನಸು ಸಾಕಾರಗೊಂಡಿದೆ ಎಂದರು.

ಶ್ರೀ ವೀರಭದ್ರ ದೇವರು ಬಾಳೆಹೊನ್ನೂರು ಮಠದ ಕ್ಷೇತ್ರಾಧಿಪತಿಯಾಗಿದ್ದು, ಅದರಂತೆ ಕನಕಗಿರಿಯಲ್ಲಿ ವೀರಭದ್ರ ದೇವಸ್ಥಾನದ ಎದುರಿಗೆ ಸಮುದಾಯ ಭವನ ನಿರ್ಮಾಣಕ್ಕೆ ಸ್ಥಳ ದಾನವಾಗಿ ದೊರೆತಿರುವುದು ಯೋಗಾಯೋಗವಾಗಿದೆ. ಪರಮ ತಪಸ್ವಿ ಲಿಂ.ಶ್ರೀಮದ್ ರಂಭಾಪುರಿ ವೀರಗಂಗಾಧರ ಜಗದ್ಗುರುಗಳ ಸತ್ಯ ಸಂಕಲ್ಪ ಸಾಕಾರಗೊಂಡ ಸಂತೃಪ್ತಿ ಮನೋಭಾವ ನಮಗಿದೆ ಎಂದು ತಿಳಿಸಿದರು.

ಹಂಪಣ್ಣ ಜೋಡಗಾಣದ, ಬಸೆಟ್ಟೆಪ್ಪ ಭತ್ತದ, ಮುದಕಪ್ಪ ಶೆಟ್ಟರ, ಗುಂಡದಮಠ ಕಂಪ್ಲಿ, ಲಕ್ಷ್ಮಣಪ್ಪ ಕನಕಪ್ಪ ಖ್ಯಾಡೆದ ದೇಣಿಗೆ ನೀಡಿದ ನಿವೇಶನದಲ್ಲಿ ಶ್ರೀ ರಂಭಾಪುರಿ ಜಗದ್ಗುರು ಶಿವಾನಂದ ರಾಜೇಂದ್ರ ಸಮುದಾಯ ಭವನ ಭವ್ಯವಾಗಿ ನಿರ್ಮಾಣಗೊಂಡಿರುವುದರಿಂದ ದಾನಿಗಳ ಪರಿವಾರದವರಿಗೂ ಆತ್ಮ ಸಂತೃಪ್ತಿ ತಂದಿದೆ. ಲೋಕಸಭೆ ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಎಲ್ಲರನ್ನೂ ಆಹ್ವಾನಿಸಿ ಅದ್ದೂರಿಯಾಗಿ ಉದ್ಘಾಟನಾ ಸಮಾರಂಭ ಆಯೋಜಿಸಲಾಗುವುದು. ಚೈತ್ರ ಶುದ್ಧ ನವಮಿಯ ಬುಧವಾರ ಉತ್ತಮ ದಿನವಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳ ಶುದ್ಧಿ ಹಾಗೂ ವೀರಶೈವ ಧರ್ಮದ ಪದ್ಧತಿ ಪ್ರಕಾರ ವಾಸ್ತು ಶಾಂತಿಗಾಗಿ ಗಂಗಾಪೂಜಾ, ಪಂಚಕಲಶ ಸ್ಥಾಪನೆ, ನವಗ್ರಹ ಪೂಜೆ, ರುದ್ರಹೋಮ ನಡೆದಿದೆ ಎಂದು ರಂಭಾಪುರಿ ಜಗದ್ಗುರುಗಳು ತಿಳಿಸಿದರು.

ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಶ್ರೀಮಠಕ್ಕೆ ದೊರೆತ ನೂರಾರು ಎಕರೆ ಜಾಗದಲ್ಲಿ ಮುಕ್ತಿ ಮಂದಿರ ಟ್ರಸ್ಟ್ ಸ್ಥಾಪನೆ ಮೂಲಕ ಸಮುದಾಯ ಭವನಗಳು, ವಸತಿ ನಿಲಯಗಳು, ಶಾಲಾ-ಕಾಲೇಜುಗಳನ್ನು ಸ್ಥಾಪಿಸಿ ಅನುಕೂಲ ಮಾಡಿಕೊಡಲಾಗಿದೆ. ಹುಬ್ಬಳ್ಳಿ, ಗದಗ, ಕುಷ್ಟಗಿ, ಶಿವಮೊಗ್ಗ, ಭದ್ರಾವತಿ ಸೇರಿ ನಾನಾ ಕಡೆಗಳಲ್ಲಿ ಭಕ್ತಿರಿಗಾಗಿ ಮಂಗಲ ಭವನಗಳು ಕಾರ್ಯನಿರ್ವಹಿಸುತ್ತಿವೆ ಎಂದರು.

ಸುವರ್ಣಗಿರಿ ಸಂಸ್ಥಾನ ವಿರಕ್ತಮಠದ ಡಾ.ಚನ್ನಮಲ್ಲ ಸ್ವಾಮಿಗಳು ಮಾತನಾಡಿ, ದಿನೇ ದಿನೆ ಬೆಳೆಯುತ್ತಿರುವ ಕನಕಗಿರಿಯಲ್ಲಿ ಭವನ ನಿರ್ಮಾಣ ಮಾಡಿರುವ ರಂಭಾಪುರಿ ಜಗದ್ಗುರುಗಳು ತಿಂಗಳಿಗೊಮ್ಮೆ ಬಂದರೆ ಭಕ್ತರು ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚು ಭಾಗವಹಿಸಲು ಸಹಕಾರಿಯಾಗಲಿದೆ ಎಂದರು.
ಚಳಗೇರಿ ಹಿರೇಮಠದ ವೀರಸಂಗಮೇಶ್ವರ ಶಿವಾಚಾರ್ಯ ಸ್ವಾಮಿಗಳು, ಕುಷ್ಟಗಿ ಮದ್ದಾನಿ ಮಠದ ಕರಿಬಸವೇಶ್ವರ ಶಿವಾಚಾರ್ಯ ಸ್ವಾಮಿಗಳು, ಸಿಂಧನೂರಿನ ಸೋಮನಾಥ ಶಿವಾಚಾರ್ಯ ಸ್ವಾಮಿಗಳು, ಕೆಂಭಾವಿ ಚನ್ನಬಸವ ಶಿವಾಚಾರ್ಯ ಸ್ವಾಮಿಗಳು, ಹೆಬ್ಬಾಳದ ಶಿವಪ್ರಕಾಶ ಶರಣರು ವೀರಶೈವ ಧರ್ಮ, ಸಂಸ್ಕೃತಿ ಮತ್ತು ಗುರು ಪರಂಪರೆಯ ಮಹತ್ವ ತಿಳಿಸಿದರು.