ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಜೇಸಿ ವೇದಿಕೆಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮಾತನಾಡಿದರು. ಡಾ.ಮಂತರ್‌ಗೌಡ, ಧರ್ಮಜ ಉತ್ತಪ್ಪ, ಚಂದ್ರಮೌಳಿ, ಚಂದ್ರಕಲಾ, ಸುರಯ್ಯ, ಹನೀಫ್, ಮಿಥುನ್, ಸೋಮಪ್ಪ ಇದ್ದರು. 
ಜಿಲ್ಲೆ

ಸರ್ವಾಧಿಕಾರ ಆಡಳಿತ ಕಿತ್ತೊಗೆಯಲು ಕಾಂಗ್ರೆಸ್ ಆಶೀರ್ವದಿಸಿ

ಎಂ.ರವಿ

ಸೋಮವಾರಪೇಟೆ: ಪ್ರಸಕ್ತ ಲೋಕಸಭಾ ಚುನಾವಣೆ ಭಾರತದ ಎರಡನೇ ಸ್ವಾತಂತ್ಯ ಸಂಗ್ರಾಮವಿದ್ದಂತೆ. ಸರ್ವಾಧಿಕಾರದ ಆಡಳಿತವನ್ನು ಕಿತ್ತೊಗೆಯಲು ಕಾಂಗ್ರೆಸ್ ನೇತೃತ್ವದ ಇಂಡಿಯ ಅಭ್ಯರ್ಥಿಗಳಿಗೆ ಮತದಾರರು ಆಶೀರ್ವಾದ ಮಾಡಬೇಕು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮನವಿ ಮಾಡಿದರು.

ಜೇಸಿ ವೇದಿಕೆಯಲ್ಲಿ ಲೋಕಸಭಾ ಚುನಾವಣೆ ಪ್ರಯುಕ್ತ ಕಾಂಗ್ರೆಸ್ ಪಕ್ಷ ಸೋಮವಾರ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಅಭ್ಯರ್ಥಿ ಎಂ.ಲಕ್ಷ್ಮಣ್ ಪರವಾಗಿ ಮತಯಾಚಿಸಿ ಮಾತನಾಡಿ, ಪ್ರಧಾನಿ ನರೇಂದ್ರ ನೇತೃತ್ವದ ಬಿಜೆಪಿ ಸರ್ಕಾರ ಕಳೆದ ಹತ್ತು ವರ್ಷಗಳ ಕಾಲ ಬಡವರ, ಕಾರ್ಮಿಕರ, ರೈತರ, ಅಲ್ಪಸಂಖ್ಯಾತರ ವಿರೋಧಿಯಾಗಿ ನಡೆದಿದೆ. ಇಡೀ ದೇಶ ಸಾಲದ ಸುಳಿಯಲ್ಲಿ ದಿವಾಳಿಯಾಗಿದೆ. ಸರ್ಕಾರಿ ಸ್ವಾಯತ್ತ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿದ್ದಾರೆ. ಇನ್ನೊಂದು ಅವಧಿಗೆ ಅವರಿಗೆ ಅಧಿಕಾರ ಸಿಕ್ಕರೆ, ಸಂವಿಧಾನ, ಪ್ರಜಾಪ್ರಭುತ್ವ ಎಲ್ಲವನ್ನು ಬುಡಮೇಲು ಮಾಡಲಿದ್ದಾರೆ ಎಂದು ದೂರಿದರು.

ಬಿಜೆಪಿ ನೇತೃತ್ವದ ಎನ್‌ಡಿಎ ನೀಡಿದ 600 ಭರವಸೆಗಳಲ್ಲಿ ಆರನ್ನೂ ಈಡೇರಿಸಿಲ್ಲ. ಆದರೆ ಹಿಂದಿನ ರಾಜ್ಯ ಸರ್ಕಾರ 165 ಭರವಸೆಗಳಲ್ಲಿ ಅಷ್ಟನ್ನೂ ಈಡೇರಿಸಿದ ಪರಿಣಾಮ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲವು ಸಾಧಿಸಿದೆ. ನಂತರ ಭರವಸೆ ನೀಡಿದ 5 ಗ್ಯಾರಂಟಿಗಳಾದ ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಯುವನೀತಿ, ಅನ್ನಭಾಗ್ಯ ರಾಜ್ಯದ ಜನರಿಗೆ ತಲುಪಿವೆ. ಜನರು ನೆಮ್ಮದಿಯಾಗಿದ್ದಾರೆ ಇವೆಲ್ಲಾ ಕಾರಣಗಳಿಂದ ಮತದಾರರ ಆಶೀರ್ವಾದ ಕಾಂಗ್ರೆಸ್‌ಗೆ ಇದೆ ಎಂದು ಭರವಸೆ ವ್ಯಕ್ತಪಡಿಸಿದರು.

ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರೋಧಿ ಅಲೆ ಇದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪರ ಅಲೆ ಇದೆ. ಸುಳ್ಳುಗಾರನ ಸರ್ಕಾರ ಪತನಗೊಳ್ಳುವುದು ಸೂರ್ಯನಷ್ಟೇ ಸತ್ಯ ಎಂದರು. ಕಪ್ಪು ಹಣ ತಂದು 15 ಲಕ್ಷ ರೂ.ಗಳನ್ನು ದೇಶವಾಸಿಗಳ ಖಾತೆಗೆ ಜಮಾ ಮಾಡುತ್ತೇವೆ ಎಂದು ಈವತ್ತಿಗೂ ನಯಾಪೈಸೆ ಖಾತೆಗೆ ಬಂದಿಲ್ಲ. ಜನರ ಖಾತೆಯಿಂದಲೇ ಹಣವನ್ನು ವಿವಿಧ ಶುಲ್ಕಗಳ ನೆಪದಲ್ಲಿ ದರೋಡೆ ಮಾಡುತ್ತಿದ್ದಾರೆ. ರೈತರ ಆದಾಯ ದ್ವಿಗುಣ ಮಾಡಲಿಲ್ಲ. ಕೃಷಿ ಬೆಳೆಗೆ ವೈಜ್ಞಾನಿಕ ಬೆಲೆ ಕೊಡಲಿಲ್ಲ. ಯುವಕ-ಯುವತಿಯರಿಗೆ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದು ಸುಳ್ಳು ಹೇಳಿದ ಮೋದಿ, ನಂತರ ಪಕೊಡ ಮಾರಿ ಎಂದು ಯುವ ಸಮುದಾಯವನ್ನು ಛೇಡಿಸಿದರು. ಈ ಚುನಾವಣೆಯಲ್ಲಿ ಮೋದಿ ವಿರುದ್ಧ ಮತ ಹಾಕುವ ಮೂಲಕ ಯುವ ಸಮುದಾಯ ಪ್ರತ್ಯುತ್ತರ ನೀಡಬೇಕು ಎಂದು ಕರೆ ನೀಡಿದರು.

ಶಾಸಕ ಡಾ.ಮಂತರ್‌ಗೌಡ ಮಾತನಾಡಿ, ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕೊಡಗಿನಿಂದ ಬಿಜೆಪಿಯನ್ನು ಬುಡಸಮೇತ ಕಿತ್ತು ಹಾಕಿದ್ದೇವೆ. ಕಷ್ಟದ ಕಾಲದಲ್ಲಿ ಕಾಂಗ್ರೆಸ್ ಕೈಹಿಡಿಯುತ್ತದೆ ಎಂದು ಜನರಿಗೆ ಗೊತ್ತಾಗಿದೆ. ಗ್ಯಾರಂಟಿ ಯೋಜನೆಗಳಿಂದ ಜನರು ನೆಮ್ಮದಿಯಿಂದ ಬದುಕುತ್ತಿದ್ದಾರೆ. ಜನಕಲ್ಯಾಣ ಯೋಜನೆಯನ್ನು ಬಿಟ್ಟಿಭಾಗ್ಯ ಎಂದು ಮಹಿಳೆಯರನ್ನು ಅವಮಾನ ಮಾಡುತ್ತಿರುವ ಬಿಜೆಪಿಗೆ ಮಹಿಳೆಯರು ಚುನಾವಣೆಯಲ್ಲಿ ತಕ್ಕಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಕಳೆದ ಹತ್ತು ತಿಂಗಳಲ್ಲಿ ಕೊಡಗಿನ ಅಭಿವೃದ್ಧಿಗೆ ರಾಜ್ಯ ಸರ್ಕಾರ ಹೆಚ್ಚಿನ ಅನುದಾನ ನೀಡಿದೆ. ನನೆಗುದಿಗೆ ಬಿದ್ದಿದ್ದ ಸಿಂಥೆಟಿಕ್ ಹಾಕಿ ಟರ್ಫ್ ಮೈದಾನ ಉದ್ಘಾಟನೆ ಮಾಡಿದೆವು. ಕಕ್ಕೆಹೊಳೆ, ಕಬ್ಬಿಣ ಸೇತುವೆಗೆ ನಿರ್ಮಾಣಕ್ಕೆ ಅನುದಾನ ಸಿಕ್ಕಿದೆ. ಮಡಿಕೇರಿ, ವಿರಾಜಪೇಟೆ ಕ್ಷೇತ್ರಗಳ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರದಿಂದ 500 ಕೋಟಿ ರೂ.ಗಳಷ್ಟು ಅನುದಾನ ಸಿಕ್ಕಿದೆ ಎಂದರು.

ಕಾಂಗ್ರೆಸ್‌ಗೆ ಕಾರ್ಯಕರ್ತರೇ ರತ್ನಗಳು. ಪಕ್ಷದ ಸಾಧನೆಗಳನ್ನು ಮತದಾರರಿಗೆ ಮನವರಿಕೆ ಮಾಡಿಕೊಡಬೇಕು. ರಾಜ್ಯದ ಗ್ಯಾರಂಟಿಗಳೊಂದಿಗೆ ದೇಶದಲ್ಲಿ ಕಾಂಗ್ರೆಸ್ ಗ್ಯಾರಂಟಿಗಳು ಸಿಗಲಿವೆ. ಮೋದಿ ಸರ್ಕಾರ ದೇಶದ ಜನರಿಗೆ ಯಾವುದೇ ಸೌಲಭ್ಯಗಳನ್ನು ನೀಡದೆ ದೇಶವನ್ನು ದಿವಾಳಿಯತ್ತ ಕೊಂಡೊಯ್ಯುತ್ತಿದೆ ಎಂದು ಆರೋಪಿಸಿದರು.

ಜೆಡಿಎಸ್, ಬಿಜೆಪಿ ತೊರೆದ ಕೆಲ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಗೊಂಡರು. ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಮೌಳಿ, ಕೆ.ಪಿ.ಚಂದ್ರಕಲಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್, ಡಿಸಿಸಿ ಉಪಾಧ್ಯಕ್ಷ ಕೆ.ಎಂ.ಲೋಕೇಶ್, ಪಕ್ಷದ ಪ್ರಮುಖರಾದ ಹನೀಫ್, ಕೆ.ಎ.ಯಾಕುಬ್, ಸುರಯ್ಯ ಅಬ್ರಾರ್, ಮಿಥುನ್ ಹಾನಗಲ್, ವಿ.ಪಿ.ಶಶಿಧರ್, ಬಿ.ಇ.ಜಯೇಂದ್ರ, ಎಚ್.ಆರ್.ಸುರೇಶ್, ಬಿ.ಪಿ.ಅನಿಲ್, ಸಿಪಿಐನ ಸೋಮಪ್ಪ, ಶೀಲಾ ಡಿಸೋಜ ಮತ್ತಿತರರು ಇದ್ದರು.