ಜಿಲ್ಲೆ

ಗೋಕಾಕ,‌ಮೂಡಲಗಿ ತಾಲೂಕಿನಲ್ಲಿ ಒಮ್ಮತದ ಅಭ್ಯರ್ಥಿ ಆಯ್ಕೆ; ಜಾರಕಿಹೊಳಿ

ಮಂಜುನಾಥ ಕೋಳಿಗುಡ್ಡ

ಬೆಳಗಾವಿ: ಈ ಬಾರಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಬಿಡಿಸಿಸಿ) ಆಡಳಿತ ಮಂಡಳಿ ನಿರ್ದೇಶಕ ಚುನಾವಣೆಗೆ ಗೋಕಾಕ, ಮೂಡಲಗಿ ತಾಲೂಕಿನಿಂದ ಒಮ್ಮದ ಅಭ್ಯರ್ಥಿಗಳ ಆಯ್ಕೆ ಮಾಡಲಾಗುವುದು ಎಂದು ಬೆಮುಲ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಗೋಕಾಕ ನಗರದ ಎನ್‌ಎಸ್‌ಎಫ್ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮೂಡಲಗಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಆಡಳಿತ ಮಂಡಳಿ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಬಿಡಿಸಿಸಿ ಚುನಾವಣೆಗೆ ಅಭ್ಯರ್ಥಿಗಳನ್ನು ಮೂರು ದಿನಗಳಲ್ಲಿ ಘೋಷಣೆ ಮಾಡುತ್ತೇವೆ. ಆಕಾಂಕ್ಷಿಗಳು ಸಾಕಷ್ಟು ಜನರಿದ್ದು, ಇಬ್ಬರನ್ನು ಮಾತ್ರ ಆಯ್ಕೆಗೆ ಪರಿಗಣಿಸಲಾಗುವುದು ಎಂದರು.

ಈಗಾಗಲೇ ಡಿಸಿಸಿ ಬ್ಯಾಂಕ್ ಚುನಾವಣೆಗೆ ಯಾರನ್ನು ಆಯ್ಕೆ ಮಾಡಬೇಕು ಎಂಬುದರ ಕುರಿತು ಹಿರಿಯರ ಅಭಿಪ್ರಾಯಗಳನ್ನು ಸಂಗ್ರಹಿಸುತ್ತಿದ್ದೇವೆ. ಕೆಲ ಸಮಾಜಗಳ ಮುಖಂಡರು ನನ್ನನ್ನು ಭೇಟಿ ಮಾಡಿ ತಮ್ಮ- ತಮ್ಮ ಸಮಾಜಗಳಿಗೆ ಪ್ರಾಶಸ್ತಯ ನೀಡುವಂತೆ ಕೋರಿಕೊಂಡಿದ್ದಾರೆ. ನಾನು ಸಹ ಆಯಾ ಸಮಾಜಗಳ ಮನವಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರೊಂದಿಗೆ ಚರ್ಚಿಸಿದ್ದೇನೆ ಎಂದು ತಿಳಿಸಿದರು.

ಈಗಾಗಲೇ ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದಲ್ಲಿ ಎರಡು ನಿರ್ದೇಶಕರ ಹುದ್ದೆಗೆ ನಾಮ ನಿರ್ದೇಶನ ಮಾಡಿಕೊಳ್ಳಲಾಗುತ್ತಿದ್ದು, ಮೂಡಲಗಿ ಮತ್ತು ಯರಗಟ್ಟಿ ತಾಲ್ಲೂಕಿನಿಂದ ಇಬ್ಬರ ಆಯ್ಕೆಗೆ ನಿರ್ಣಯ ತೆಗೆದುಕೊಂಡಿದ್ದೇವೆ. ಮುಂಬರುವ ದಿನಗಳಲ್ಲಿ ಇತರರಿಗೂ ಸೂಕ್ತ ಸ್ಥಾನಮಾನಗಳನ್ನು ನೀಡಲಾಗುವುದು. ಎಲ್ಲರೂ ಚುನಾವಣೆಯಲ್ಲಿ ಗೆಲ್ಲಲು ಪ್ರಯತ್ನಿಸಬೇಕು ಎಂದರು.

ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ, ಸಂತೋಷ ತಮ್ಮಣ್ಣ ಪಾರ್ಶಿ ಇತರರಿದ್ದರು.