ಜಿಲ್ಲೆ

ಪರವಾನಗಿ ಪಡೆಯದೇ ಸಾಗಿದೆ ಬ್ಲಾಸ್ಟಿಂಗ್

ಗದಗ: ಕಲ್ಲು ಗಣಿಗಾರಿಕೆ ಮಾಡಲು ಪರವಾನಗಿ ಪಡೆದ ನಂತರ ಅಕ್ರಮವಾಗಿ ಜಿಲೆಟಿನ್ ಹಾಗೂ ಇತರೆ ಸ್ಪೋಟಕ ಸಾಮಗ್ರಿಗಳನ್ನು ಬಳಸಿ ಕಲ್ಲಿನ ಕ್ವಾರಿಗಳಲ್ಲಿರುವ ಬಂಡೆಗಳನ್ನು ಸ್ಪೋಟಿಸುವ ಕೃತ್ಯ ಜಿಲ್ಲೆಯಲ್ಲಿ ಹಲವಾರು ವರ್ಷಗಳಿಂದ ನಿರಂತರವಾಗಿ ನಡೆದಿದೆ.

ಜಿಲ್ಲೆಯ ಹಾಲಿ ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು ಹಾಗೂ ರಾಜಕೀಯ ನಂಟು ಹೊಂದಿರುವ ಪ್ರಭಾವಿಗಳು ಕಲ್ಲು ಕ್ವಾರಿಗಳ ಮಾಲೀಕರಾಗಿರುವುದರಿಂದ ಅಧಿಕಾರಿಗಳು ಒತ್ತಡಕ್ಕೆ ಮಣಿದು ಅವರ ವಿರುದ್ಧ ಕ್ರಮ ಜರುಗಿಸುತ್ತಿಲ್ಲ ಎಂಬ ದೂರಿದೆ. ಜಿಲ್ಲೆಯಲ್ಲಿ ಒಟ್ಟು 61 ಕಲ್ಲಿನ ಕ್ವಾರಿಗಳು ಕಾರ್ಯನಿರ್ವಹಿಸುತ್ತಿವೆ. ಬಹುತೇಕ ಕ್ವಾರಿಗಳು ಪಟ್ಟಾ ಭೂಮಿಯಲ್ಲಿದ್ದು, 5 ವರ್ಷದಿಂದ 30 ವರ್ಷಗಳ ವರೆಗೆ ಲೀಸ್ ಪಡೆದುಕೊಂಡಿವೆ.

ಕಲ್ಲಿನ ಕ್ವಾರಿಗಳಲ್ಲಿ ಅಕ್ರಮ ವಾಗಿ ಸ್ಪೋಟಕ ವಸ್ತುಗಳನ್ನು ಬಳಸಿ ಸ್ಪೋಟಿಸಿದ ಪರಿಣಾಮ ಅಲ್ಲಿ ಕೆಲಸ ಮಾಡುತ್ತಿದ್ದ ಅನೇಕ ಕಾರ್ವಿುಕರು ಕೈ, ಕಾಲು ಕಳೆದುಕೊಂಡು ಶಾಶ್ವತವಾಗಿ ಅಂಗವಿಕಲ ರಾಗಿದ್ದಾರೆ. ಹಲವಾರು ಮಂದಿ ಪ್ರಾಣವನ್ನೂ ಕಳೆದು ಕೊಂಡಿದ್ದಾರೆ. ಆದರೂ, ಈ ಕುರಿತು ಜಿಲ್ಲೆಯ ಯಾವುದೇ ಠಾಣೆಯಲ್ಲೂ ಕೇಸ್ ದಾಖಲಾಗಿಲ್ಲ. ಆಕಸ್ಮಾತ್ ಕೇಸ್ ದಾಖಲಾಗಿದ್ದರೆ ಕಲ್ಲಿನ ಗಣಿ ಕುಳಗಳು ಗಣಿ ಮತ್ತು ಭೂವಿಜ್ಞಾನ ಇಲಾಖೆ ಮತ್ತು ಪೊಲೀಸ್ ಇಲಾಖೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ರಾಜಿ ಸಂಧಾನದ ಮೂಲಕ ಕೇಸ್ ಇತ್ಯರ್ಥ ಪಡಿಸುವಂತಹ ಪರಿಪಾಠ ಜಿಲ್ಲೆಯಲ್ಲಿ ನಡೆದುಕೊಂಡು ಬಂದಿದೆ.

ಅನುಮತಿಯೇ ಇಲ್ಲ: ಕಲ್ಲು ಗಣಿಗಾರಿಕೆ ಘಟಕ ದವರು ಕಲ್ಲು ಒಡೆಯಲು ಸ್ಪೋಟಕ ವಸ್ತುಗಳನ್ನು ಬಳಸಿ ಸ್ಫೋಟ (ಬ್ಲಾಸ್ಟಿಂಗ್) ಮಾಡುತ್ತಾರೆ. ಈ ಕುರಿತು ಸಂಬಂಧಿಸಿದ ಇಲಾಖೆಯಿಂದ ಕಲ್ಲು ಬ್ಲಾಸ್ಟಿಂಗ್ ಮಾಡುವ ಕುರಿತು ಪರವಾನಗಿ ಪಡೆಯುವುದು ಕಡ್ಡಾಯ. ಆದರೆ, ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಕಲ್ಲು ಗಣಿ ಗುತ್ತಿಗೆದಾರರು ಬ್ಲಾಸ್ಟಿಂಗ್​ಗೆ ಪರವಾನಗಿ ಪಡೆದವರ ಕಡತವೇ ಇಲ್ಲ. ಹೀಗಾಗಿ, ಈ ಕುರಿತು ಗಣಿ ಇಲಾಖೆಯು 28-1-2019ರಂದು (ಡೆಪ್ಯೂಟಿ ಕಂಟ್ರೋಲರ್ ಆಫ್ ಎಕ್ಸ್ ಪ್ಲೋಸಿವ್, ಬೆಂಗಳೂರು) ಮೇಲಧಿಕಾರಿಗಳಿಗೆ ಪತ್ರ ಬರೆದು ಮಾಹಿತಿ ಕೋರಿದೆ. ಆದರೆ, ಆ ಮಾಹಿತಿ ಕೂಡಾ ಇಲ್ಲಿವರೆಗೆ ಲಭ್ಯವಿಲ್ಲ. ಅಂದರೆ, ಕಳೆದ ಹಲವಾರು ವರ್ಷಗಳಿಂದ ಕಲ್ಲು ಗಣಿಗಾರಿಕೆ ಘಟಕಗಳು ಪರವಾನಗಿ ಇಲ್ಲದೆ ಕಲ್ಲು ಬ್ಲಾಸ್ಟಿಂಗ್ ಮಾಡುತ್ತಿವೆ. ಇದಲ್ಲದೆ, ಕಲ್ಲು ಸ್ಪೋಟಗೊಳಿಸಲು ಬಳಸುವ ಸ್ಪೋಟಕ ವಸ್ತುಗಳು ಯಾವುವು? ಎಲ್ಲಿಂದ ತರಲಾಗುತ್ತಿದೆ? ಸ್ಪೋಟಗೊಳಿಸಲು ಇರಬೇಕಾದ ಮಾನದಂಡಗಳೇನು? ಇದ್ಯಾವುದು ಸಹ ಗಣಿ ಇಲಾಖೆಯಲ್ಲಿ ದಾಖಲೆಗಳು ಇಲ್ಲ.

ಡ್ರೋನ್ ಸರ್ವೆ

ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಕಲ್ಲು ಗಣಿಗಾರಿಕೆಗೆ ಪರವಾನಗಿ ನೀಡುವ ಸಂದರ್ಭದಲ್ಲಿ ಕ್ವಾರಿ ನಡೆಸುವ ಕುರಿತು ನಿರ್ದಿಷ್ಟ ಷರತ್ತುಗಳನ್ನು ವಿಧಿಸುತ್ತದೆ. ಮುಖ್ಯವಾಗಿ ಕಲ್ಲು ಗಣಿಗಾರಿಕೆ ಮಾಡಲು ಪರವಾನಗಿ ನೀಡಿದ ನಿರ್ದಿಷ್ಟ ಸರ್ವೆ ನಂಬರ್​ನಲ್ಲಿ ಮಾತ್ರ ಕಲ್ಲು ತೆಗೆಯಬೇಕು. ರಾಜ್ಯ ಪರಿಸರ ಇಲಾಖೆಯಿಂದ ಅನುಮತಿ ಪಡೆದ ಪರಿಸರ ವಿಮೋಚನಾ ಪತ್ರದಲ್ಲಿ (ಇಸಿ ಅಪ್ರೋವಲ್) 15 ಅಡಿ ಆಳದಲ್ಲಿ ಮಾತ್ರ ಕಲ್ಲು ತೆಗೆಯಬೇಕು ಎಂಬ ಆದೇಶವಿದ್ದರೂ ಕೆಲ ಕ್ವಾರಿಗಳಲ್ಲಿ 25-40 ಅಡಿ ಆಳದಲ್ಲಿ ಕಲ್ಲು ಗಣಿಗಾರಿಕೆ ಮಾಡಿದ್ದಾರೆ. ಜಿಲ್ಲೆಯಲ್ಲಿರುವ ಎಲ್ಲ ಕಲ್ಲು ಗಣಿ ಗುತ್ತಿಗೆಗಳನ್ನು ಡ್ರೋನ್ ಕ್ಯಾಮರಾ ಮೂಲಕ ಸರ್ವೆ ಮಾಡಿಸಲಾಗಿದ್ದರೂ ವರದಿಯನ್ನು ಗಣಿ ಇಲಾಖೆ ಸ್ವೀಕೃತಿ ಮಾಡಿಕೊಳ್ಳದಿರುವುದು ಸಂಶಯಕ್ಕೆ ಕಾರಣವಾಗಿದೆ. ಡ್ರೋನ್ ಕ್ಯಾಮರಾದಲ್ಲಿ ಮಾಡಿಸಲಾದ ಸರ್ವೆ ವರದಿ ಸ್ವೀಕೃತಿ ಮಾಡಿಕೊಂಡು ವರದಿ ಸಿದ್ಧಪಡಿಸಿದರೆ ಕ್ವಾರಿಗಳ ಸಂಪೂರ್ಣ ಮಾಹಿತಿ ಬೆರಳ ತುದಿಯಲ್ಲಿ ಲಭ್ಯವಿರುತ್ತದೆ. ಯಾವ ಸರ್ವೆ ನಂಬರ್​ನಲ್ಲಿ ಕಲ್ಲಿನ ಗಣಿಗಾರಿಕೆ ಮಾಡಲಾಗುತ್ತಿದೆ, ಎಷ್ಟು ಅಡಿ ಆಳದಲ್ಲಿ ಭೂಮಿಯನ್ನು ಕೊರೆಯಲಾಗಿದೆ ಎಂಬ ಸಮಗ್ರ ಮಾಹಿತಿ ಲಭ್ಯವಿರುತ್ತದೆ. ಇದನ್ನು ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಅಂತರ್ಜಾಲದಲ್ಲಿ ಶೋಧಿಸಿ ನೋಡಬಹುದು. ಇಷ್ಟಿದ್ದರೂ ಗಣಿ ಇಲಾಖೆ ಡ್ರೋನ್ ಸರ್ವೆ ವರದಿಯನ್ನು ಸ್ವೀಕೃತಿ ಮಾಡಿಕೊಳ್ಳದಿರುವುದು ಶಂಕೆಗೆ ಕಾರಣವಾಗಿದೆ.

ಬೋರ್​ವೆಲ್, ಬೆಳೆ ಹಾಳು

ಕಲ್ಲು ಗಣಿಗಾರಿಕೆ ಮಾಡಲು ಪರವಾನಗಿ ಪಡೆದಿರುವವರು ಕಲ್ಲು ಇರುವಂತಹ ಜಮೀನಿನನ್ನು ಖರೀದಿಸಿ (ಲೀಸ್ ಪಡೆದು) ಗಣಿಗಾರಿಕೆ ಆರಂಭಿಸುತ್ತಾರೆ. 20ರಿಂದ 40 ಅಡಿ ಆಳಕ್ಕೆ ಭೂಮಿ ಕೊರೆಯಲಾಗುತ್ತಿದೆ. ಅಲ್ಲದೆ, ಭೂಮಿ ಯೊಳಗಿರುವ ಕಲ್ಲನ್ನು ಜಿಲೆಟಿನ್ ಬಳಸಿ ಸ್ಪೋಟಗೊಳಿಸಲಾಗುತ್ತಿದೆ. ಹೀಗೆ ಬ್ಲಾಸ್ಟ್ ಮಾಡಿದ ಪ್ರದೇಶದಿಂದ 200-300 ಮೀಟರ್ ಸುತ್ತಲೂ ಇರುವ ಜಮೀನಿಗಳಿಗೆ ತುಂಬಾ ಹಾನಿಯುಂಟಾಗುತ್ತಿದೆ. ಮುಖ್ಯವಾಗಿ ಬ್ಲಾಸ್ಟ್ ಮಾಡಿದ ನಂತರ ಕಲ್ಲಿನ ತುಂಡುಗಳು ಪಕ್ಕದ ಜಮೀನಿಗೆ ಬಂದು ಬೀಳುತ್ತಿವೆ. ಭೂಮಿ ನಡುಗಿದಂತಾಗುತ್ತದೆ. ಜತೆಗೆ, ಪಕ್ಕದ ಜಮೀನಿನ ಬೋರ್​ವೆಲ್​ಗಳ ಅಂತರ್ಜಲ ಕಡಿಮೆ ಆಗುತ್ತಿದ್ದು, ಸ್ಪೋಟದ ತೀವ್ರತೆಗೆ ಬೋರ್ ವೆಲ್ ನಲ್ಲಿ ಮಣ್ಣು ಸೇರಿಕೊಂಡು ಬೋರ್​ಗಳು ಹಾಳಾಗುತ್ತಿದೆ. ಬ್ಲಾಸ್ಟ್ ಮಾಡಿದ ನಂತರ ಅಲ್ಲಿಂದ ಹೊರಡುವ ಧೂಳು ಬೆಳೆ ಮೇಲೆ ಕುಳಿತು ಬೆಳೆ ಸಹ ಹಾಳಾಗು ತ್ತಿರುವುದರಿಂದ ರೈತರು ತೊಂದರೆಗೆ ಸಿಲುಕಿದ್ದಾರೆ. ಈ ಅನ್ಯಾಯ ಕುರಿತು ಮಾತನಾಡುವ ರೈತನ ಮೇಲೆ ಸ್ಥಳೀಯ ಪೊಲೀಸ್ ಅಧಿಕಾರಿಗಳ ಮೂಲಕ ಧಮಕಿ ಹಾಕಿಸುವುದು, ಬೆದರಿಸಿ ಬಾಯಿ ಮುಚ್ಚಿಸುವ ಕೆಲಸವೂ ನಡೆದಿದೆ. ಈ ಕುರಿತು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ರಾಜ್ಯಪಾಲರಿಗೂ ಸಂಬಂಧಿಸಿದ ರೈತರು ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.

EndFragment