ಜಿಲ್ಲೆ

ಸಿಡಿಮದ್ದು ಅಕ್ರಮ ಸಂಗ್ರಹ ಪತ್ತೆ

ಎ. ಆರ್. ರಘುರಾಮ

ಅರಕಲಗೂಡು : ತಾಲೂಕಿನ ಬೋಳಕ್ಯಾತನಹಳ್ಳಿ ಗ್ರಾಮದ ಹೇಮಾವತಿ ನದಿಯಲ್ಲಿ ಜಾಕ್ ವೆಲ್ ನಿರ್ಮಾಣಕ್ಕೆ ಅಡ್ಡಗಾಲಾದ ಬಂಡೆಕಲ್ಲು ಸ್ಫೋಟಿಸಲು ಗುತ್ತಿಗೆದಾರ ನಿಯಮಗಳನ್ನು ಮೀರಿ ಭಾರಿ ಪ್ರಮಾಣದ ಸಿಡಿಮದ್ದು ಸಂಗ್ರಹಿಸಿರುವುದು ಭಾನುವಾರ ಬೆಳಕಿಗೆ ಬಂದಿದೆ.
ಬಹುಗ್ರಾಮ ಯೋಜನೆಯಡಿ ಕುಡಿಯುವ ನೀರು ಸರಬರಾಜು ಮಾಡುವ ಕಾಮಗಾರಿಗಾಗಿ ಹೇಮಾವತಿ ನದಿ ಬಳಿ ಜಾಕ್‌ವೆಲ್ ನಿರ್ಮಿಸಲು ಬಂಡೆಕಲ್ಲು ಅಡ್ಡಲಾಗಿತ್ತು. ಅದನ್ನು ಸ್ಫೋಟಿಸಲು ಗುತ್ತಿಗೆದಾರ ಜಿಲ್ಲಾಧಿಕಾರಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅನುಮತಿ ಪಡೆಯದೇ ಜಿಲೆಟಿನ್ ಸಿಡಿಮದ್ದುಗಳನ್ನು ಸಂಗ್ರಹಿಸಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಹಾಸನ ಜಿಲ್ಲೆ ಮಾತ್ರವಲ್ಲದೇ ತುಮಕೂರು, ಮಂಡ್ಯ, ಮೈಸೂರು ಜಿಲ್ಲೆಯ ರೈತರ ಕೃಷಿ ಜಮೀನಿಗೆ ಹಾಗೂ ಕುಡಿಯುವ ನೀರು ಒದಗಿಸುವ ಪ್ರಮುಖವಾದ ಗೊರೂರು ಹೇಮಾವತಿ ಜಲಾಶಯ ಕೇವಲ ಮೂರ್ನಾಲ್ಕು ಕಿ.ಮೀ. ಅಂತರದಲ್ಲೇ ಇದ್ದು, ಇಲ್ಲಿ ಸ್ಫೋಟಕ ಸಾಮಗ್ರಿ ಸಂಗ್ರಹ ಮಾಡಿರುವುದು ಆತಂಕ ಮೂಡಿಸಿದೆ.ನೀರಿನ ಯೋಜನೆಯನ್ನು ಅನುಷ್ಠಾನಕ್ಕೆ ತರುವ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಹೇಮಾವತಿ ಜಲಾಶಯದ ಮಹತ್ವ ಅರಿಯದೆ ಮನಬಂದಂತೆ ಕಾಮಗಾರಿ ನಡೆಸುತ್ತಿದ್ದಾರೆ. ಹೇಮಾವತಿ ನದಿಯಲ್ಲಿ ಜಾಕ್ ವೆಲ್ ನಿರ್ಮಾಣದ ಸಂದರ್ಭ ದೊಡ್ಡ ಬಂಡೆ ಸಿಕ್ಕಿದೆ ಎಂದ ಮಾತ್ರಕ್ಕೆ ಹಿಂದೆ ಮುಂದೆ ಏನು ಯೋಚನೆ ಮಾಡದೆ, ಯಾವುದೇ ಕಾನೂನಾತ್ಮಕ ಸಲಹೆ -ಸೂಚನೆ ಅನುಸರಿಸದೇ ದೊಡ್ಡ ಪ್ರಮಾಣದ ಸ್ಫೋಟಕ ವಸ್ತುಗಳನ್ನು ಬಳಸಲು ಮುಂದಾಗಿರುವ ಕುರಿತು ಸ್ಥಳೀಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಗುತ್ತಿಗೆದಾರನ ಬೇಜವಾಬ್ದಾರಿಯಿಂದಾಗಿ ಕಾಮಗಾರಿಗೆ ಅಗೆದ ಮಣ್ಣನ್ನು ಹೊಳೆಗೇ ಸುರಿಸುವ ಮೂಲಕ ಅರ್ಧದಷ್ಟು ನದಿ ಒಡಲು ಮುಚ್ಚಲಾಗಿದೆ. ಇದೀಗ ಬಂಡೆ ಸ್ಫೋಟಕ್ಕೆ ಸಿದ್ಧತೆ ನಡೆಸಿರುವುದರಿಂದ ಗ್ರಾಮದ ಹಲವು ಮನೆಗಳು ಬಿರುಕು ಬಿಡುವ ಸಾಧ್ಯತೆಯೂ ಇದೆ. ಈ ಕುರಿತು ಗುತ್ತಿಗೆದಾರನ ವಿರುದ್ಧ ಕ್ರಮ ಜರುಗಿಸುವಂತೆ ಗ್ರಾಮಸ್ಥ ಮಂಜುನಾಥ್ ಅವರು ಅರಕಲಗೂಡು ಪೊಲೀಸರಿಗೆ ದೂರು ನೀಡಿದ್ದರೂ ಪ್ರಕರಣ ದಾಖಲಾಗಿಲ್ಲ.
ಸಿಡಿ ಮದ್ದುಗಳ ಸಂಗ್ರಹ ಮಾಡಿರುವ ಕುರಿತು ಸ್ಥಳೀಯರು ಅರಕಲಗೂಡು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದು, ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮಸ್ಥರ ಸಹಾಯದಿಂದ ಸಿಡಿಮದ್ದುಗಳು ಪತೆಯಾದರೂ ಗುತ್ತಿಗೆದಾರನಿಗೆ ಸಹಾಯ ಮಾಡಲು ಪ್ರಕರಣ ಮುಚ್ಚಿ ಹಾಕುವ ದುರುದ್ದೇಶದಿಂದ ಕೇಸು ದಾಖಲಿಸಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.

1