ಜಿಲ್ಲೆ

ಮಾಗಡಿ ರಸ್ತೆಯ ಫುಡ್​ ಫ್ಯಾಕ್ಟರಿಯಲ್ಲಿ ಸ್ಫೋಟ! ಇಬ್ಬರ ಸಜೀವ ದಹನ

ಬೆಂಗಳೂರು: ನಗರದ ಮಾಗಡಿ ರಸ್ತೆಯ ಫುಡ್​ ಫ್ಯಾಕ್ಟರಿಯಲ್ಲಿ ಬಾಯ್ಲರ್​​ ಸ್ಫೋಟವಾಗಿದ್ದು, ಇಬ್ಬರು ಸಜೀವ ದಹನವಾಗಿರುವ ಘಟನೆ ವರದಿಯಾಗಿದೆ. ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಇನ್ನೂ ಐವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.

ಮಾಗಡಿ ರಸ್ತೆಯ ಅಂಜನ್​ ಥಿಯೇಟರ್​ ಬಳಿ ಇರುವ ವಿಜಯ್​ ಎಂಬುವರಿಗೆ ಸೇರಿದ ಎಂ.ಎಂ.ಫುಡ್ಸ್​​ ಫ್ಯಾಕ್ಟರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಅಗ್ನಿ ಶಾಮಕ ದಳದವರು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಬಿಹಾರ ಮೂಲದ ಮನಿಷ್(21) ಮತ್ತು ಸೌರಭ್(21)​ ಎಂಬ ಕಾರ್ಮಿಕರು ಮೃತಪಟ್ಟಿದ್ದಾರೆ. ಒಬ್ಬರು ಮಹಿಳೆ ಸೇರಿದಂತೆ ಇನ್ನೂ ಐವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.