ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಜ್ಯಕ್ಕೆ ಬರ ಅಧ್ಯಯನ ತಂಡ ತಡವಾಗಿ ಬರಲು ರಾಜ್ಯ ಸರ್ಕಾರವೇ ಕಾರಣ. ರಾಜ್ಯದಿಂದ ಪ್ರಸ್ತಾವನೆ ಸಲ್ಲಿಸಿದ ತಕ್ಷಣವೇ ತಂಡ ಬಂದಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಿಂದ ಪ್ರಸ್ತಾವ ಬಂದ ಬಳಿಕವೇ ಕೇಂದ್ರ ತಂಡ ಬರಬೇಕು. ರಾಜ್ಯದಿಂದಲೇ ತಡವಾಗಿ ಬಂದರೆ ಏನು ಮಾಡಬೇಕು?. ರಾಜ್ಯ ಸರ್ಕಾರ ಎಲ್ಲದಕ್ಕೂ ಕೇಂದ್ರದತ್ತ ಕೈ ತೋರಿಸಬಾರದು. ಕೆಲ ತಾಲೂಕುಗಳು ಬರದಿಂದ ಉಳಿದಿವೆ. ಅದನ್ನು ಮೊದಲು ರಾಜ್ಯ ಸರ್ಕಾರ ಘೋಷಣೆ ಮಾಡಲಿ. ಅಲ್ಲದೇ, ಕಾವೇರಿ ಹಾಗೂ ಬರ ವಿಷಯಕ್ಕೆ ಸ್ಪಂದಿಸಲು ಕೇಂದ್ರ ಸರ್ಕಾರ ತಯಾರಿದೆ ಎಂದರು.
ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರ ಶಿವಶಂಕರಪ್ಪ ಅತ್ಯಂತ ಹಿರಿಯರು. ಎಲ್ಲ ಮಾಹಿತಿ ಇಟ್ಟುಕೊಂಡೇ ಅವರು ಮಾತನಾಡಿದ್ದಾರೆ. ಅವರ ಹೇಳಿಕೆ ಕುರಿತು ರಾಜ್ಯ ಸರ್ಕಾರ ಗಂಭೀರ ಚಿಂತನೆ ಮಾಡಬೇಕು ಎಂದರು.
ಪ್ರಕರಣ ಹಿಂಪಡೆದರೆ ಹೋರಾಟ: ಹಳೇ ಹುಬ್ಬಳ್ಳಿ ಘಟನೆ ಸೇರಿ ಸಮಾಜ ದ್ರೋಹಿ ಹಾಗೂ ದೇಶದ್ರೋಹಿ ಚಟುವಟಿಕೆ ನಡೆಸಿದವರ ವಿರುದ್ಧ ದಾಖಲಾದ ಯಾವುದೇ ಒಂದು ಪ್ರಕರಣ ಹಿಂಪಡೆದರೂ ಹೋರಾಟ ಮಾಡಲಾಗುವುದು. ರಾಜ್ಯ ಸರ್ಕಾರ ರೈತಪರ ಹೋರಾಟಗಾರರ ಅಥವಾ ಕನ್ನಡಪರ ಹೋರಾಟಗಾರರ ಕೇಸ್‌ಗಳನ್ನು ಹಿಂಪಡೆದರೆ ನಮ್ಮ ಅಭ್ಯಂತರವಿಲ್ಲ. ಆದರೆ ರಾಜಕೀಯಕ್ಕೋಸ್ಕರ ಪೊಲೀಸರನ್ನು ಕೊಲೆ ಮಾಡಲು ಬಂದ, ಪೊಲೀಸ್ ಠಾಣೆ ಲೂಟಿ ಮಾಡಿ ಸಮಾಜದಲ್ಲಿ ಅಶಾಂತಿ ಉಂಟು ಮಾಡಿದವರ ಮೇಲಿನ ಕೇಸುಗಳನ್ನು ಹಿಂಪಡೆಯುತ್ತಿರುವುದು ನಾಚಿಕೆಗ್ಗೇಡಿನ ಸಂಗತಿ. ಇದನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದ್ದು, ರಾಜ್ಯ ಸರ್ಕಾರ ಕೂಡಲೇ ಈ ನಡೆಯಿಂದ ಹಿಂದೆ ಸರಿಯಬೇಕು. ಇಲ್ಲವಾದಲ್ಲಿ ಹೋರಾಟ ನಿಶ್ಚಿತ ಎಂದು ಸಚಿವ ಪ್ರಲ್ಹಾದ ಜೋಶಿ ಎಚ್ಚರಿಸಿದರು.