ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡ ಮರ್ಲೆ ಅಣ್ಣಯ್ಯ ಮಾತನಾಡಿದರು. 
ಜಿಲ್ಲೆ

ಅಕ್ರಮವಾಗಿ ಜಮೀನು ಖಾತೆ ವಿರೋಧಿಸಿ ಉಸ್ತುವಾರಿ ಸಚಿವರಿಗೆ ಕಪ್ಪುಪಟ್ಟಿ ಪ್ರದರ್ಶನ

ಚಿಕ್ಕಮಗಳೂರು: ಗವನಹಳ್ಳಿ ಸರ್ವೆ ನಂಬರ್ ೯೩ರಲ್ಲಿ ಸರ್ಕಾರಿ ಜಮೀನನ್ನು ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಆ. ೧೫ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶನ ಮತ್ತು ಮೌನ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಂಘಟನೆಗಳ ಒಕ್ಕೂಟದ ಮುಖಂಡ ಮರ್ಲೆ ಅಣ್ಣಯ್ಯ ತಿಳಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಕಸಬಾ ಹೋಬಳಿ ಗವನಹಳ್ಳಿ ಗ್ರಾಮದ ಸರ್ವೆ ನಂಬರ್ ೯೨ರಲ್ಲಿ ಕೆಲವು ದಲಿತ ಕುಟುಂಬಗಳಿಗೆ ಮಂಜೂರಾಗಿರುವ ಜಮೀನನ್ನು ಖರೀದಿಸಲು ಕ್ರಯ ಒಪ್ಪಂದ ಮಾಡಿಕೊಂಡಿರುವ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವ ವ್ಯಕ್ತಿಗಳು ಈ ಸರ್ವೆ ನಂಬರ್‌ನ ಪಕ್ಕದ ಜಮೀನನ್ನು ಬದಲಾವಣೆ ಮಾಡಿಕೊಂಡು ಸರ್ಕಾರಿ ಜಮೀನನ್ನು ಕಬಳಿಸುವ ಹುನ್ನಾರ ನಡೆಸುತ್ತಿದ್ದರು. ಅದಕ್ಕೆ ಅವಕಾಶ ನೀಡದಂತೆ ಕ್ರಮಕೈಗೊಳ್ಳಲು ದಲಿತ ಸಂಘಟನೆಗಳಿAದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಳೆದ ವರ್ಷ ಇದೇ ಸಂದರ್ಭದಲ್ಲಿ ಮನವಿ ಸಲ್ಲಿಸಲಾಗಿತ್ತು. ಆದರೆ, ಸಚಿವರು ಜಮೀನು ಕಬಳಿಕೆ ಯತ್ನ ತಡೆಯಲಿಲ್ಲ. ನಮ್ಮ ಮನವಿಗೆ ಜಿಲ್ಲಾಧಿಕಾರಿಯೂ ಸ್ಪಂದಿಸಲಿಲ್ಲ ಎಂದು ಆರೋಪಿಸಿದರು.
ಕ್ರಯಪತ್ರ ಒಪ್ಪಂದ ಮಾಡಿಕೊಂಡಿರುವ ರಿಯಲ್‌ಎಸ್ಟೇಟ್ ವ್ಯವಹಾರ ನಡೆಸುವ ವ್ಯಕ್ತಿಗಳು ಸ.ನಂ.೯೨ ರ ಹಿಡುವಳಿ ಜಮೀನಿಗೆ ಬದಲಾಗಿ ದಲಿತ ಜಮೀನುದಾರರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿಕೊಂಡು ಸ.ನಂ. ೯೩ರ ಸರ್ಕಾರಿ ಜಮೀನನ್ನು ಬದಲಾವಣೆ ಮಾಡಿಕೊಂಡು ಇತ್ತೀಚೆಗೆ ಅಕ್ರಮವಾಗಿ ಖಾತೆ ಮಾಡಿಸಿಕೊಂಡಿದ್ದಾರೆ ಎಂದು ದೂರಿದರು.
ಮೇಲ್ನೋಟಕ್ಕೆ ಈ ಪ್ರಕರಣದಲ್ಲಿ ತಹಸೀಲ್ದಾರ್ ಮತ್ತು ಎಡಿಎಲ್‌ಆರ್ ಅವರು ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವ ವ್ಯಕ್ತಿಗಳಿಗೆ ಅನುಕೂಲ ಮಾಡಿಕೊಟ್ಟಂತೆ ಕಾಣುತ್ತಿದೆ. ಈ ರೀತಿ ಸರ್ಕಾರಿ ಜಮೀನನ್ನು ಖಾಸಗಿ ವ್ಯಕ್ತಿಗಳಿಗೆ ಕಾನೂನು ಬಾಹಿರವಾಗಿ ಖಾತೆ ಮಾಡಿಕೊಟ್ಟಿರುವ ತಹಸೀಲ್ದಾರ್, ಎಡಿಎಲ್‌ಆರ್ ಸೇರಿದಂತೆ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅಕ್ರಮವಾಗಿ ಮಾಡಿರುವ ಖಾತೆ ರದ್ದುಮಾಡಿ ಸರ್ಕಾರಿ ಜಮೀನಾಗಿ ಮರುಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಟಿಯಲ್ಲಿ ಪ್ರಮುಖರಾದ ದಂಟರಮಕ್ಕಿ ಶ್ರೀನಿವಾಸ್, ಕೆ.ಸಿ.ವಸಂತ್‌ಕುಮಾರ್, ಬಾಲಕೃಷ್ಣ, ಲಕ್ಷö್ಮಣ, ಹೊನ್ನೇಶ್ ಮತ್ತಿತರರಿದ್ದರು.