ಜಿಲ್ಲೆ

ತೆಂಗಿಗೆ ಕಪ್ಪುತಲೆ ಹುಳು ಕಾಟ

ಗಂಗಾಧರ ಬಿ ವಿ

* ತೋಟಗಳಲ್ಲಿ ಹಸಿರಿಲ್ಲದೆ ಒಣಗುತ್ತಿರುವ ಮರಗಳು

* ರೈತರಲ್ಲಿ ಫಸಲು ನಷ್ಟದ ಭೀತಿ

* ಹರೀಸಂದ್ರ, ಸುಗ್ಗನಹಳ್ಳಿ, ಹಳ್ಳಿಮಾಳದಲ್ಲಿ ರೋಗ ಉಲ್ಬಣ

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ

ತಾಲೂಕಿನ ಕಸಬಾ ಹೋಬಳಿಯ ಹರೀಸಂದ್ರ, ಸುಗ್ಗನಹಳ್ಳಿ, ಹಳ್ಳಿಮಾಳ ಮತ್ತಿತರ ಗ್ರಾಮಗಳ ತೆಂಗಿನ ತೋಟಗಳಲ್ಲಿ ಕಪ್ಪುತಲೆ ಹುಳು ಬಾಧೆ ಕಾಣಿಸಿಕೊಂಡಿದ್ದು, ತೆಂಗಿನ ಮರದ ಗರಿಗಳು ಒಣಗಿದಂತೆ ಕಾಣುತ್ತಿದ್ದು, ರೈತರಲ್ಲಿ ಫಸಲು ನಷ್ಟದ ಭೀತಿ ಆವರಿಸಿದೆ.

ರಾಮನಗರ ತಾಲೂಕಿನಲ್ಲಿ ರೈತರು ವಾಣಿಜ್ಯ ಬೆಳೆಗಳಾಗಿ ಮಾವು ಅವಲಂಬಿಸಿರುವಂತೆ ಲಭ್ಯವಿರುವ ನೀರಾವರಿ ಪ್ರದೇಶದಲ್ಲಿ ತೆಂಗು ಬೆಳೆಯುತ್ತಿದ್ದಾರೆ. ಹೆಚ್ಚಾಗಿ ಅರ್ಕಾವತಿ ನದಿ ಮತ್ತು ಹಳ್ಳ ಕೊಳ್ಳದ ಪ್ರದೇಶದಲ್ಲಿ ತೆಂಗು ಹೆಚ್ಚಾಗಿದೆ.

ಕಸಬಾ ಹೋಬಳಿಯ ಬಹುತೇಕ ಪ್ರದೇಶ ಅರ್ಕಾವತಿ ನದಿ ದಂಡೆಯಲ್ಲಿದೆ. ಈ ಭಾಗದ ಎಡ ಮತ್ತು ಬಲ ಭಾಗದ ತೆಂಗಿನ ತೋಟಗಳಲ್ಲಿ ಕೆಲವು ತಿಂಗಳಿಂದ ಕಪ್ಪುತಲೆ ಕೀಟ ಬಾಧೆ ಕಾಣಿಸಿಕೊಂಡು ಮರಗಳೇ ಒಣಗುತ್ತಿರುವಂತೆ ಭಾಸವಾಗುತ್ತಿದೆ. ಹೆಚ್ಚಾಗಿ ಹರೀಸಂದ್ರ, ಹಳ್ಳಿಮಾಳ, ಸುಗ್ಗನಹಳ್ಳಿ ಭಾಗಗಳಲ್ಲಿ ಕಂಡು ಬಂದಿದೆ. ಕಳೆದ ವರ್ಷ ಬಿಡದಿ, ಕೈಲಾಂಚ ಭಾಗದಲ್ಲಿ ಈ ರೋಗ ಕಂಡು ಬಂದಿತ್ತು. ರೋಗ ತಡೆಗೆ ರೈತರು ಔಷಧ ಸಿಂಪಡಣೆ ಮಾಡುತ್ತಿದ್ದರೂ ನಿಯಂತ್ರಣ ಆಗಿಲ್ಲ.

ರೋಗ ತಡೆಗೆ ಪರೋಪ ಜೀವಿ ಸೃಷ್ಟಿ:

ತೋಟಗಾರಿಕೆ ಇಲಾಖೆಯಿಂದ ಚನ್ನಪಟ್ಟಣ ತೋಟಗಾರಿಕೆಯ ಪರೋಪಜೀವಿ ಪ್ರಯೋಗಶಾಲೆಯಲ್ಲಿ ಗೋನಿಯೋಜಸ್​ ಪರತಂತ್ರ ಜೀವಿ ಉತ್ಪಾದಿಸಿ ರೈತರಿಗೆ ನೀಡಿ ಕೀಟಬಾಧೆ ನಿಯಂತ್ರಣಕ್ಕೆ ಮುಂದಾಗಿದೆ. ಪರೋಪ ಜೀವಿಯಿಂದ ಮುಂದಿನ ದಿನಗಳಲ್ಲಿ ಕೀಟಬಾಧೆ ನಿಯಂತ್ರಣಕ್ಕೆ ಬರುವ ವಿಶ್ವಾಸವಿದ್ದು, ಹೆಚ್ಚು ಹೆಚ್ಚು ಪರೋಪ ಜೀವಿಗಳನ್ನು ಉತ್ಪಾದಿಸಿ ರೈತರ ಅಗತ್ಯಕ್ಕೆ ತಕ್ಕಂತೆ ನೀಡಿ, ರೋಗ ನಿಯಂತ್ರಣಕ್ಕೆ ಇಲಾಖೆ ಕ್ರಮ ಕೈಗೊಳ್ಳಬೇಕು ಎಂಬುದು ರೈತರ ಒತ್ತಾಯ.

ಗೋನಿಯೋಜಸ್​ ಪರತಂತ್ರ ಜೀವಿ ತಂದು ರೋಗಪೀಡಿತ ತೆಂಗಿನಮರಗಳ ಬುಡದಲ್ಲಿ ಹರಡಿದರೆ ಪರತಂತ್ರ ಜೀವಿ ತೆಂಗಿನಮರದ ಮೇಲೆ ಹೋಗಿ ಕಪ್ಪುತಲೆ ಹುಳು ಲಾರ್ವೆಯ ಬಳಿ ಮೊಟ್ಟೆ ಇಟ್ಟು ನಂತರದ ದಿನಗಳಲ್ಲಿ ಕಪ್ಪುತಲೆ ಹುಳುಗಳನ್ನು ಸಾಯುವ ರೀತಿ ಮಾಡುತ್ತವೆ. ಇದು ನಿಧಾನಗತಿ ಜೈವಿಕ ನಿಯಂತ್ರಣ ಆದರೂ ಸೂಕ್ತ ಹಾಗೂ ಪರಿಣಾಮಕಾರಿ ಎನ್ನುತ್ತಾರೆ ವಿಜ್ಞಾನಿಗಳು.

ಒಣಗುವ ಗರಿಗಳು

ಕೀಟ ಮೊದಲು ತೆಂಗಿನಮರದ ಒಂದು ಗರಿಗೆ ಹರಡಿ ಅಲ್ಲೇ ಮೊಟ್ಟೆ ಇಟ್ಟು ಶರವೇಗದಲ್ಲಿ ಕೀಟಗಳು ಹೆಚ್ಚಾಗಿ ಒಂದೊಂದೇ ಗರಿಯನ್ನು ತಿನ್ನುತ್ತವೆ. ಇದರಿಂದ ಗರಿಗಳಲ್ಲಿ ಹಸಿರು ಮಾಯವಾಗಿ ಒಣಗುತ್ತವೆ. ಕೀಟಬಾಧೆ ಹತೋಟಿಗೆ ಬಾರದಿದ್ದರೆ ಇಡೀ ಮರವೇ ಸುಳಿಯಿಲ್ಲದಂತೆ ಒಣಗಿ, ಎಳನೀರು, ತೆಂಗಿನ ಕಾಯಿ ಫಸಲು ಇಲ್ಲವಾಗುತ್ತದೆ.

ಬೇಸಿಗೆಯಲ್ಲಿ ರೋಗ ಉಲ್ಬಣ

ತೆಂಗಿನಮರದ ಹಸಿರು ಭಾಗದ ಗರಿ ಮೇಲೆ ಕೂರುವ ಕೀಟ ಮೊದಲು ಕೆಳಭಾಗದ ಹಸಿರು ಗರಿಯನ್ನು ಕೆರೆದು ತಿನ್ನುತ್ತವೆ, ನಂತರ ಮೇಲ್ಭಾಗದ ಗರಿಗಳಿಗೆ ಹರಡಿ, ಮರವನ್ನೇ ಆಶ್ರಯಿಸಿಕೊಳ್ಳುತ್ತವೆ. ಒಂದು ಕೀಟ ಸರಾಸರಿ 170 ರಿಂದ 180 ಮೊಟ್ಟೆ ಇಡುತ್ತದೆ. ಕಪ್ಪುತಲೆ ಹುಳು ಕೇವಲ 1 ರಿಂದ ಒಂದೂವರೆ ಸೆಂಮೀ ಮಾತ್ರ ಇರುತ್ತದೆ. ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ರೋಗ ಕಂಡುಬರುತ್ತದೆ. ಮಾರ್ಚ್​, ಏಪ್ರಿಲ್​ನಲ್ಲಿ ಹೆಚ್ಚಾಗಿ ಕಾಣುತ್ತದೆ.

ರಾಸಾಯನಿಕ ಸಿಂಪಡಣೆ

10 ಎಂ.ಎಲ್​. ಮೊನೊಕ್ರೋಟೊಫಾಸ್​ ಅಥವಾ 10 ಎಂ.ಎಲ್​. ಕ್ವಿನಾಲ್ಪಾಸ್​ ಔಷಧವನ್ನು 10&20 ಎಂಎಲ್​ ನೀರಿನೊಂದಿಗೆ ಬೆರೆಸಿ ತೆಂಗಿನ ಮರದ ಬುಡದಲ್ಲಿ ಬೇರಿನ ಮೂಲಕ ಉಪಯೋಗಿಸಿದಾಗ ಕೀಟಬಾಧೆ ನಿಯಂತ್ರಿಸಬಹುದು.

ರಾಸಾಯನಿಕ ಬೇರಿನ ಮೂಲಕ ಮರದ ಗರಿ, ತೆಂಗಿನ ಫಸಲಿಗೆ ಹೋಗುವ ಕಾರಣ ಔಷಧ ಸಿಂಪಡಿಸಿದ 45 ದಿನಗಳವರೆಗೆ ಎಳನೀರು, ತೆಂಗಿನಕಾಯಿ ಫಸಲು ತೆಂಗಿನಮರಗಳಲ್ಲಿ ಕೊಯ್ಯುವಾಗಿಲ್ಲ.

ಕಪ್ಪುತಲೆ ಹುಳು ಬಾಧೆ ತೆಂಗು ಬೆಳೆಯುವ ರೈತರನ್ನು ನಷ್ಟಕ್ಕೆ ದೂಡುತ್ತಿದೆ. ಔಷಧ ಸಿಂಪಡಿಸಿದರೂ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಗೋನಿಯೋಜಸ್​ ಪರತಂತ್ರ ಜೀವಿಯಿಂದ ಮಾತ್ರ ರೋಗ ಹತೋಟಿ ಮಾಡಬಹುದು ಎಂದು ರೈತರು ಹೇಳುತ್ತಿದ್ದಾರೆ. ತೋಟಗಾರಿಕೆ ಇಲಾಖೆ ಹೆಚ್ಚು ಪ್ರಮಾಣದಲ್ಲಿ ಪರತಂತ್ರ ಜೀವಿ ಉತ್ಪಾದಿಸಿ ಬೇಡಿಕೆಗೆ ತಕ್ಕಂತೆ ನೀಡಿ ಕೀಟಬಾಧೆ ನಿಯಂತ್ರಿಸಬೇಕು.

ಆರ್​. ಚಿಕ್ಕಭೈರೇಗೌಡ, ಅಧ್ಯಕ್ಷ, ರಾಮನಗರ ಜಿಲ್ಲಾ ತೆಂಗು ಮತ್ತು ಮಾವು ರೈತ ಉತ್ಪಾದಕ ಕಂಪನಿ

ಮೂರು ತಿಂಗಳಿಂದ ತೆಂಗಿನ ತೋಟದಲ್ಲಿ ಕಪ್ಪುತಲೆ ಕೀಟಬಾಧೆಯಿಂದ ತೆಂಗಿನಗರಿಗಳು ಒಣಗಿದಂತೆ ಕಾಣುತ್ತಿವೆ. ಔಷಧ ಸಿಂಪಡಿಸಿದರೂ ಕಪ್ಪುತಲೆ ಹುಳು ನಿಯಂತ್ರಣವಾಗುತ್ತಿಲ್ಲ. ಒಂದೊಂದೇ ಗರಿಗಳು ಒಣಗಿ ಮರಗಳಲ್ಲಿ ಫಲವತ್ತತೆ ಇಲ್ಲವಾಗುತ್ತಿರುವುದು ಆತಂಕ ತರುತ್ತಿದೆ.

ರಾಮಕೃಷ್ಣಯ್ಯ, ರೈತ, ಸುಗ್ಗನಹಳ್ಳಿ