Black soot at Kudalasangama Cross for Maharashtra Bus 
ಜಿಲ್ಲೆ

ಮಹಾರಾಷ್ಟ್ರ ಬಸ್‌ಗೆ ಕೂಡಲಸಂಗಮ ಕ್ರಾಸ್‌ನಲ್ಲಿ ಕಪ್ಪು ಮಸಿ

ಕೂಡಲಸಂಗಮ: ಚಿತ್ರದುರ್ಗ-ಸೋಲಾಪುರ ರಾಷ್ಟ್ರೀಯ ಹೆದ್ದಾರಿ 50ರ ಕೂಡಲಸಂಗಮ ಕ್ರಾಸ್‌ನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕೂಡಲಸಂಗಮ ಘಟಕದ ಅಧ್ಯಕ್ಷ ಸಂಜು ಗೌಡರ ನೇತೃತ್ವದಲ್ಲಿ ಸೋಮವಾರ ರಾತ್ರಿ 10 ಗಂಟೆ ಕರವೇ ಪದಾಧಿಕಾರಿಗಳು ಮಹರಾಷ್ಟ್ರ ರಸ್ತೆ ಸಾರಿಗೆ ಘಟಕದ ಉಸ್ಮಾನಬಾದ- ಸೋಲಾಪುರ-ಬೆಂಗಳೂರು ಬಸ್ ತಡೆದು ಚಾಲಕ, ನಿರ್ವಾಹಕನಿಗೆ ಕನ್ನಡ ಮಾತನಾಡಲು ಸೂಚಿಸಿ, ಬಸ್‌ನ ಮರಾಠಿ ನಾಮಲಕಗಳಿಗೆ ಮಸಿ ಬಳೆದರು.

ಕರವೇ ಪದಾಧಿಕಾರಿಗಳು ಚಾಲಕ, ನಿರ್ವಾಹಕನಿಗೆ ಕನ್ನಡ ಶಾಲು ಹಾಕಿ, ಧ್ವಜ ನೀಡಿ ಜೈ ಕರ್ನಾಟಕ, ಜೈ ಕನ್ನಡ ಎಂಬ ಘೋಷಣೆ ಕೂಗಿಸಿದರು. ಬಸ್‌ನ ಎಲ್ಲ ಮರಾಠಿ ನಾಮಲಕಗಳಿಗೆ ಮಸಿ ಬಳೆದು ಜೈ ಕರ್ನಾಟಕ, ಜೈ ಕನ್ನಡ ಎಂದು ಘೋಷ ವಾಕ್ಯಗಳನ್ನು ಬರೆದು ಬಸ್ ಬೆಂಗಳೂರಿಗೆ ಹೊಗಲು ಬಿಟ್ಟರು.

ಕನ್ನಡಿಗರ ಮೇಲೆ ಮರಾಠಿಗರು ನಿರಂತರವಾಗಿ ಪುಂಡಾಟಿಕೆ ಮೆರೆಯುತ್ತಿದ್ದಾರೆ. ಮರಾಠಿಗರಿಗೆ ಕನ್ನಡಿಗರು ಏನು ಎಂದು ತೋರಿಸಿದ್ದೇವೆ. ಕನ್ನಡಿಗರ ಮೇಲೆ ಹಲ್ಲೆ ಮಾಡುವ ಪ್ರವೃತ್ತಿ ಮುಂದುವರಿಸಿದರೆ, ನಾವು ಭೀಕರ ಸ್ವರೂಪದ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ. ರಾಜ್ಯದಲ್ಲಿ ಸಂಚರಿಸುವ ಮಹಾರಾಷ್ಟ್ರ ಬಸ್‌ಗಳ ನಾಮಲಕ ಕನ್ನಡದಲ್ಲಿಯೇ ಇರಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಕೂಡಲಸಂಗಮ ಘಟಕದ ಅಧ್ಯಕ್ಷ ಸಂಜು ಗೌಡರ ಆಗ್ರಹಿಸಿದರು.

ಪದಾಧಿಕಾರಿಗಳಾದ ಪ್ರವೀಣ ವಾಲಿಕಾರ, ಸೋಹಿಲ್ ಸುತ್ತಾರ, ಮಂಜು ವಡ್ಡರ, ಸಂಗಮೇಶ ಗೊತ್ತಗಿ ಮುಂತಾದವರು ಇದ್ದರು.