ಜಿಲ್ಲೆ

ಬಿ.ಎಲ್.ಸಂತೋಷ್, ಪ್ರಹ್ಲಾದ್ ಜೋಷಿ ಪಟಾಲಂನ ಅಧ್ಯಕ್ಷ ಪ್ರತಾಪ್ ಸಿಂಹ

ಸಚಿವರಾದ ಎಂ.ಬಿ. ಪಾಟೀಲ್ ಮತ್ತು ಡಾ.ಎಚ್.ಸಿ.ಮಹದೇವಪ್ಪ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಚೇಲಾಗಳು ಎಂಬ ಸಂಸದ ಪ್ರತಾಪ್ ಸಿಂಹ ಅವರ ಟೀಕೆಗೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮ್ಮಣ್ ತಿರುಗೇಟು ನೀಡಿದ್ದಾರೆ.


ಬಿ.ಎಲ್.ಸಂತೋಷ್, ಪ್ರಹ್ಲಾದ್ ಜೋಷಿ ಪಟಾಲಂನ ಅಧ್ಯಕ್ಷ ಪ್ರತಾಪ್ ಸಿಂಹ, ಕಾರ್ಯದರ್ಶಿ ಸಿ.ಟಿ.ರವಿ ಎಂದು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಲೇವಡಿ ಮಾಡಿದರು.

ನಿಮ್ಮ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿರೋದೇ ಒಂದು ಕ್ಷೇತ್ರದಲ್ಲಿ. ಇದರಿಂದ ಜನರಿಗೆ ನಿಮ್ಮ ಯೋಗ್ಯತೆ ಈಗಾಗಲೇ ಗೊತ್ತಾಗಿದೆ. ಮುಂದಿನ ಚುನಾವಣೆಯಲ್ಲಿ ಜನ ನಿಮಗೆ ತಕ್ಕ ಉತ್ತರ ಕೊಡುತ್ತಾರೆ ಎಂದು ಹರಿಹಾಯ್ದರು.
ಸಂಸತ್ ಕಲಾಪದಲ್ಲಿ ಎಷ್ಟು ದಿನ ಮಾತನಾಡಿದ್ದೀರಾ? ಎಷ್ಟು ದಿನ ರಾಜ್ಯದ ಸಮಸ್ಯೆ ಬಗ್ಗೆ ಧ್ವನಿ ಎತ್ತಿದ್ದೀರಾ? ನೀವು ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡಿದರೆ ದೊಡ್ಡ ಮನುಷ್ಯನಾಗುತ್ತೇನೆ ಅಂದುಕೊಂಡಿದ್ದೀರಾ? ನಿಮ್ಮ ಬಂಡವಾಳ ನಮಗೂ ಗೊತ್ತು ಎಂದರು.


ನಿಮಗೆ ಒಕ್ಕಲಿಗರ ಮೇಲೆ ಇದ್ದಕ್ಕಿದ್ದಂತೆ ಯಾಕೆ ಒಲವು ಬಂದಿದೆ? ಡಿ.ಕೆ.ಶಿವಕುಮಾರ್ ಬಗ್ಗೆ ಪ್ರೀತಿ, ವಿಶ್ವಾಸ ಇದ್ದರೆ ಯಾಕೆ ಜೈಲಿಗೆ ಹಾಕಿಸಿದ್ರಿ? ಒಕ್ಕಲಿಗರ ಮೇಲಿದ್ದ ಅಭಿಮಾನ ಆಗ ಎಲ್ಲಿಗೆ ಹೋಗಿತ್ತು ಎಂದು ಎಂ.ಲಕ್ಷ್ಮ್ಮಣ್ ಪ್ರಶ್ನಿಸಿದರು.
ಮೈಸೂರು ವಿಮಾನ ನಿಲ್ದಾಣ ಅಭಿವೃದ್ಧಿ ವಿಚಾರವಾಗಿ ಪ್ರತಾಪಸಿಂಹ ಹೇಳಿದ ಕಡೆಯಲ್ಲಿ ಒಂದು ಸಭೆ ಮಾಡೋಣ. ಅವರು ಏನು ಮಾಡಬೇಕು ಅಂದುಕೊಂಡಿದ್ದಾರೋ ಕೇಳೋಣ. ಕೇಂದ್ರ ಸರ್ಕಾರದಿಂದ ಏನೆಲ್ಲ ತರಬೇಕೋ ಮೊದಲು ಅವರು ತರಲಿ. ನಮ್ಮಿಂದ ಏನು ಬೇಕೋ ಎಲ್ಲವನ್ನೂ ಮಾಡಲು ನಾವು ಸಿದ್ಧ ಎಂದರು.


ಸಚಿವ ಡಾ. ಎಚ್.ಸಿ.ಮಹದೇವಪ್ಪ ಅವರೊಂದಿಗೆ ನಾವು ಚರ್ಚೆಗೆ ಬರುತ್ತೇವೆ. ಸುಮ್ಮನೆ ಅಧಿಕಾರಿಗಳ ಸಭೆ ನಡೆಸಿ ಮಾತನಾಡುವುದಲ್ಲ ಎಂದು ಟೀಕಿಸಿದರು.


ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಡಾ. ಬಿ.ಜೆ.ವಿಜಯಕುಮಾರ್, ಪ್ರಧಾನ ಕಾರ್ಯದರ್ಶಿ ಶಿವಣ್ಣ, ಜಿಪಂ ಮಾಜಿ ಅಧ್ಯಕ್ಷ ರಾಮು, ಕೆ.ಮಹೇಶ್ ಇದ್ದರು.