ಜಿಲ್ಲೆ

‘ಬಿಜೆಪಿ ಗೆಲುವಿನ ಓಟ ಮುಂದುವರಿಯಬೇಕು’

ಸುನಿಲ್ ಪೊನ್ನೇಟಿ

ಮಡಿಕೇರಿ:

ಕೊಡಗು ಮತ್ತು ದಕ್ಷಿಣ ಕನ್ನಡ ಮಧ್ಯೆ ಸಾಂಸ್ಕೃತಿಕ ಸಂಬAಧ ಇದೆ. ಜ. ಕಾರ್ಯಪ್ಪ, ಜ. ತಿಮ್ಮಯ್ಯ ಅವರಂತಹ ಅಪರೂಪದ ಸೇನಾ ದಂಡನಾಯಕರನ್ನು ಜಗತ್ತಿಗೆ ನೀಡಿದ ಕೊಡಗಿನ ಜನತೆಗೆ ರಾಷ್ಟç್ರಭಕ್ತಿಯ ಬಗ್ಗೆ ಹೇಳಿಕೊಡಬೇಕಾಗಿಲ್ಲ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿಯೂ ಆಗಿರುವ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದರು. ಮಡಿಕೇರಿಯ ಕೊಡವ ಸಮಾಜ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೊಡಗು ಜಿಲ್ಲಾ ಬಿಜೆಪಿ ವಿಶೇಷ ಕಾರ್ಯಕಾರಿಣಿ ಮತ್ತು ಸಂಸದರಿಗೆ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಆಡಳಿತ ಪಕ್ಷದವರು ಬಿಜೆಪಿ ಕಾರ್ಯಕರ್ತರನ್ನು ಹೆದರಿಸುತ್ತೇವೆ ಎಂದರೆ ಅವರು ಭ್ರಮೆಯಲ್ಲಿ ಇದ್ದಾರೆ ಎಂದು ಅರ್ಥ. ನಾವು ಸಂವಿಧಾನ ಉಳಿಸುವ ಕೆಲಸ ಮಾಡುವವರು ಎಂದು ಹೇಳುತ್ತಾ ಬಂದವರು ಪ್ರತಿಭಟನೆ ನಡೆಸುವವರ ವಿರುದ್ಧ ಪ್ರಕರಣ ದಾಖಲು ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ತೋರಿಸಿದ ಉತ್ಸಾಹವನ್ನು ಕಾರ್ಯಕರ್ತರು ಸದ್ಯದಲ್ಲೇ ಬರಲಿರುವ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಸಂದರ್ಭದಲ್ಲೂ ತೋರಿಸಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಮೈಸೂರು - ಕೊಡಗು ಸಂಸದ ಯದುವೀರ್ ಶ್ರೀಕಂಠದತ್ತ ಚಾಮರಾಜ ಒಡೆಯರ್ ಮಾತನಾಡಿ ಮಳೆಯಿಂದಾಗಿ ಕೊಡಗು ಸಂಕಷ್ಟದಲ್ಲಿ ಇರುವುದರಿಂದ ಅಭಿನಂದನೆ ಸ್ವೀಕರಿಸುವುದು ಸರಿಯಲ್ಲ. ಹಲವು ಸವಾಲುಗಳನ್ನು ಎದುರಿಸಿ ಕಾರ್ಯಕರ್ತರು, ನಾಯಕರ ಪರಿಶ್ರಮದಿಂದ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧ್ಯವಾಯಿತು. ಇದು ಕಾವೇರಮ್ಮ, ಚಾಮುಂಡೇಶ್ವರಿ, ಅಯೋಧ್ಯೆ ಬಾಲರಾಮನ ವಿಜಯ ಎಂದು ಹೇಳಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ ಬಿಜೆಪಿ ಜಿಲ್ಲೆಯಲ್ಲಿ ಬಲಿಷ್ಠ ಎನ್ನುವುದನ್ನು ಲೋಕಸಭಾ ಚುನಾವಣೆ ತೋರಿಸಿಕೊಟ್ಟಿದೆ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನವರು ಬಿಟ್ಟಿ ಭಾಗ್ಯದ ಆಮಿಷ ತೋರಿಸಿ ಗೆದ್ದಿದ್ದಾರೆ. ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗಿದೆ. ಈ ಬಗ್ಗೆ ಬಿಜೆಪಿ ಕಾರ್ಯಕರ್ತರು ಧ್ವನಿ ಎತ್ತಬೇಕು ಎಂದರು.
ಜಿಲ್ಲಾ ಬಿಜೆಪಿ ವಿಶೇಷ ಕಾರ್ಯಕಾರಿಣಿಯಲ್ಲಿ ಮೂರು ನಿರ್ಣಯಗಳನ್ನು ಅಂಗೀಕರಿಸಲಾಯಿತು.

ಮೂರನೇ ಬಾರಿಗೆ ಪ್ರಧಾನಿ ಆದ ನರೇಂದ್ರ ಮೋದಿ ಅವರಿಗೆ ಜಿಲ್ಲಾ ಬಿಜೆಪಿ ಅಭಿನಂದಿಸಿದ ನಿರ್ಣಯವನ್ನು ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಮಂಡಿಸಿದರು. ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಬಿ. ಭಾರತೀಶ್ ಮತ್ತು ವಕ್ತಾರ ಟಿ.ಎ. ಕಿಶೋರ್ ಈ ನಿರ್ಣಯ ಅನುಮೋದಿಸಿದರು.

ಜಿಲ್ಲೆಗೆ ಮಾರಕವಾದ ರಾಜ್ಯ ಸರ್ಕಾರದ ಸುತ್ತೋಲೆಗಳನ್ನು ಖಂಡಿಸಿ ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ನಿರ್ಣಯ ಮಂಡಿಸಿದರು. ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ರಾಬಿನ್ ದೇವಯ್ಯ ಮತ್ತು ವಕ್ತಾರ ಬಿ.ಕೆ. ಅರುಣ್‌ಕುಮಾರ್ ಈ ನಿರ್ಣಯಕ್ಕೆ ಅನುಮೋದನೆ ನೀಡಿದರು.

ರಾಜ್ಯ ಸರ್ಕಾರದ ಅಭಿವೃದ್ಧಿ ಶೂನ್ಯ ಮತ್ತು ವೈಫಲ್ಯದ ಆಡಳಿತದ ವಿರುದ್ಧ ಮಾಜಿ ಎಂಎಲ್‌ಸಿ ಎಸ್.ಜಿ. ಮೇದಪ್ಪ ನಿರ್ಣಯ ಮಂಡಿಸಿದರು. ರಾಜ್ಯ ಶಿಸ್ತು ಸಮಿತಿ ಸದಸ್ಯೆ ರೀನಾ ಪ್ರಕಾಶ್ ಮತ್ತು ಮಾಧ್ಯಮ ಪ್ರಮುಖ್ ಸುಬ್ರಹ್ಮಣ್ಯ ಉಪಾಧ್ಯ ಈ ನಿರ್ಣಯಕ್ಕೆ ಅನುಮೋದನೆ ನೀಡಿದರು.

ಇದೇ ಕಾರ್ಯಕ್ರಮದಲ್ಲಿ ಸಂಸದರಾದ ಕ್ಯಾ. ಬ್ರಿಜೇಶ್ ಚೌಟ, ಯದುವೀರ್ ಶ್ರೀಕಂಠದತ್ತ ಚಾಮರಾಜ ಒಡೆಯರ್ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರನ್ನು ಸನ್ಮಾನಿಸಲಾಯಿತು. ಪಕ್ಷದ ಜಿಲ್ಲಾ ಉಪಾಧ್ಯಕ್ಷ ಮಹೇಶ್ ಜೈನಿ, ಕಾರ್ಯದರ್ಶಿ ಚಲನ್, ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಇದ್ದರು.