ವಿಜಯವಾಣಿ ಸುದ್ದಿಜಾಲ ಧಾರವಾಡ
ಲೋಕಸಭೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯ ಪ್ರತಿ ಹಂತದಲ್ಲಿ ಬಿಜೆಪಿ ಅಭ್ಯಥಿರ್ ಪ್ರಲ್ಹಾದ ಜೋಶಿ ಗೆಲುವಿನ ಅಂತರ ಹೆಚ್ಚುತ್ತಿದ್ದಂತೆ ಕೃಷಿ ವಿಶ್ವ ವಿದ್ಯಾಲಯ ಮುಖ್ಯ ದ್ವಾರದ ಬಳಿ ಕಾರ್ಯಕರ್ತರ ಜಯಘೋಷ ಮುಗಿಲು ಮುಟ್ಟಿತ್ತು.
ಮತ ಎಣಿಕೆ ಸಮಯದಲ್ಲಿ ಯಾವುದೇ ಗೊಂದಲ ಉಂಟಾಗದಿರಲಿ ಎಂಬ ಕಾರಣಕ್ಕೆ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದ ಕಾರಣ ಹೇಳಿಕೊಳ್ಳುವಂತಹ ವಿಜಯೋತ್ಸವ ಸಂಭ್ರಮ ಅಷ್ಟಾಗಿ ಇರಲಿಲ್ಲ. ಆದಾಗ್ಯೂ ಕಾರ್ಯಕರ್ತರು ಅಭ್ಯಥಿರ್ ಪ್ರಲ್ಹಾದ ಜೋಶಿ ಬರುವ ಪೂರ್ವದಲ್ಲೇ ಮುಖ್ಯ ದ್ವಾರ ಬಳಿ ಪಟಾಕಿ ಸಿಡಿಸಿ, ಗುಲಾಲು ಎರಚಿ ಸಂಭ್ರಮಿಸಿದರು.
ಗೆಲುವು ಖಚಿತವಾಗುತ್ತಿದ್ದಂತೆ ಕುಟುಂಬ ಸಮೇತರಾಗಿ ಮನೆಯಿಂದ ಹೊರಟ ಪ್ರಲ್ಹಾದ ಜೋಶಿ ನಗರದ ನುಗ್ಗಿಕೇರಿ ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿ ಕೇಂದ್ರಕ್ಕೆ ಆಗಮಿಸಿದಾಗ ಪಕ್ಷದ ಶಾಸಕರು, ಮುಖಂಡರು, ಕೆಲ ಕಾರ್ಯಕರ್ತರು ಹಸ್ತಲಾವ ಮಾಡಿ ಅಭಿನಂದನೆ ಸಲ್ಲಿಸಿದರು. ಬಳಿಕ ಕೆಲ ಹೊತ್ತು ಪರಿಶೀಲನೆ ನಡೆಸಿದ ಅವರು ಅಲ್ಲಿಂದ ತೆರಳಿದರು. ಕೇಂದ್ರದಲ್ಲಿ ಪ್ರಮಾಣಪತ್ರ ಸ್ವೀಕರಿಸಿ ತೆರಳುವಾಗ ಜುಬಿಲಿ ವೃತ್ತದಲ್ಲಿ ಕೆಲ ಕಾರ್ಯಕರ್ತರು ಹಾರ ಹಾಕಿ ಸಂಭ್ರಮಿಸಿದರು.
ಅಂತಿಮ ಸುತ್ತಿನ ಮತ ಎಣಿಕೆ ಸಮಯದಲ್ಲಿ ಜೋಶಿ ಗೆಲುವು ಖಚಿತವಾಗುತ್ತಿದ್ದಂತೆ ಕೇಂದ್ರದಲ್ಲಿದ್ದ ಕಾರ್ಯಕರ್ತರು ಜಯಘೋಷ ಮೊಳಗಿಸಿದರು. ಕೂಡಲೇ ಪೊಲೀಸರು ಮಧ್ಯ ಪ್ರವೇಶಿಸಿ ಘೋಷಣೆ ಕೂಗದಂತೆ ಸೂಚಿಸಿದರು. ಆದಾಗ್ಯೂ ಕೆಲವರು ಘೋಷಣೆ ಹಾಕಿ ಕಾರಣ ಎಲ್ಲ ಕಾರ್ಯಕರ್ತರನ್ನು ಕೇಂದ್ರದಿಂದ ಹೊರಹಾಕುವ ಮೂಲಕ ಪರಿಸ್ಥಿತಿ ತಿಳಿಗೊಳಿಸಿದರು. ಕಳೆದ ಬಾರಿ ಮುಖ್ಯ ದ್ವಾರದ ಬಳಿಯ ಮೈದಾನದಲ್ಲಿ ವಿಜಯೋತ್ಸವಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಈ ಬಾರಿ ಒಳಗೆ ಪ್ರವೇಶ ಇಲ್ಲದ ಕಾರಣ ಕಾರ್ಯಕರ್ತರಲ್ಲಿ ತಕ್ಕಮಟ್ಟಿಗೆ ಬೇಸರ ಉಂಟಾಗಿತ್ತು. ಉಳಿದಂತೆ ಇಡೀ ಮತದಾನ ಪ್ರಕ್ರಿಯೆ ಶಾಂತಿಯತವಾಗಿ ನಡೆಸಲು ಜಿಲ್ಲಾಡಳಿತ ಕ್ರಮ ವಹಿಸಿತ್ತು.
*ಕಾಣದ ಜೆಡಿಎಸ್ ಬಾವುಟ: ಚುನಾವಣೆಗೂ ಪೂರ್ವದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಹೀಗಾಗಿ ನಾಮಪತ್ರ ಸಲ್ಲಿಕೆ ಹಾಗೂ ಪ್ರಚಾರ ಕಾರ್ಯಗಳಲ್ಲಿ ಜೆಡಿಎಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು. ಆದರೆ ಲಿತಾಂಶ ಘೋಷಣೆ ಸಮಯದಲ್ಲಿ ಜೆಡಿಎಸ್ ಕಾರ್ಯಕರ್ತರು ಮಾತ್ರ ಕಾಣಲಿಲ್ಲ. ಕೃವಿವಿ ಮುಖ್ಯದ್ವಾರ ಬಳಿ ಬಿಜೆಪಿ ಕಾರ್ಯಕರ್ತರು ಆಚರಿಸಿದ ವಿಜಯೋತ್ಸವದಲ್ಲಿ ಸಹ ಜೆಡಿಎಸ್ ಬಾವುಟ ಕಾಣಲಿಲ್ಲ.
*ಬಿಗಿ ಬಂದೋಬಸ್ತ್: ಚುನಾವಣೆ ಮತ ಎಣಿಕೆ ಕೇಂದ್ರದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಕೃವಿವಿ ಮುಖ್ಯ ದ್ವಾರ ಸಂಪೂರ್ಣ ಬಂದ್ ಮಾಡಿದ್ದಲ್ಲದೆ, ಅಧಿಕಾರಿಗಳು, ಏಜೆಂಟರು ಹಾಗೂ ಮಾಧ್ಯಮ ಪ್ರತಿನಿಧಿಗಳ ಪ್ರವೇಶಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಈ ದಾರಿಯಲ್ಲಿ ಮೂರು ಹಂತದಲ್ಲಿ ತಪಾಸಣೆ ನಡೆಸಿ ಪಾಸ್ ಹೊಂದಿದವರಿಗೆ ಮಾತ್ರ ಕೇಂದ್ರಕ್ಕೆ ಪ್ರವೇಶ ನೀಡಲಾಗುತ್ತಿತ್ತು. ಹೀಗಾಗಿ ಆವರಣದಲ್ಲಿ ಯಾವುದೇ ಕಾರ್ಯಕರ್ತರು ಕಾಣದೆ ಬಿಕೋ ಎನ್ನುತ್ತಿತ್ತು.