ಸಿಂಧನೂರು (ರಾಯಚೂರು) ಕಾಂಗ್ರೆಸ್ ಸರಕಾರ ಸುಭದ್ರವಾಗಿದೆ. ಸರ್ಕಾರದ ಬಗ್ಗೆ ಊಹಾಪೋಹ ಹರಿಬಿಡಲಾಗುತ್ತಿದ್ದು, ಬಿಜೆಪಿಯ ಈ ತಂತ್ರ ಫಲಿಸುವುದಿಲ್ಲವೆಂದು ಪೌರಾಡಳಿತ ಮತ್ತು ಹಜ್ ಇಲಾಖೆ ಸಚಿವ ರಹೀಂ ಖಾನ್ ಹೇಳಿದರು.
ಸಿಂಧನೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಹಿಂದೆ ಎರಡು ಬಾರಿಯೂ ಬಿಜೆಪಿ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದಿಲ್ಲ. ಆಪರೇಷನ್ ಕಮಲ ನಡೆಸಿತ್ತು. ಮುಂದೆಯೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ನಮ್ಮ ಯಾವುದೇ ಶಾಸಕರು ಬಿಜೆಪಿಯೊಂದಿಗೆ ಸಂಪರ್ಕದಲ್ಲಿ ಇಲ್ಲ. ಆ ರೀತಿಯ ಊಹಾಪೋಹದಲ್ಲಿ ಹುರುಳಿಲ್ಲ. ಸುಳ್ಳು ಸುದ್ದಿ ಹರಿಬಿಡುವ ಬಿಜೆಪಿ ತಂತ್ರ ನಡೆಯುವದಿಲ್ಲ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸುಭದ್ರ ಆಡಳಿತ ಕೊಡುತ್ತಿದೆ ಎಂದರು.
ರಾಜ್ಯದಲ್ಲಿ ಅನಧಿಕೃತ ಆಸ್ತಿಗಳಿಗೆ ಎ.ಖಾತಾ, ಬಿ.ಖಾತಾ ನೀಡುವ ಪ್ರಕ್ರಿಯೆ ಶೇ.50 ರಷ್ಟು ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿ ಪಂಚಾಯಿತಿ ಹಂತದಲ್ಲೂ ಖಾತೆ ಕೊಡಲಾಗುತ್ತದೆ. ಈ ಬಗ್ಗೆ ಗೆಜೆಟ್ ನೋಟಿಪಿಕೇಶನ್ ಮಾಡಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮೂರು ಇಲಾಖೆಗಳಿಂದ ಖಾತೆ ಮಾಡಿಕೊಡುವುದನ್ನು ವಿಶೇಷ ಆಸಕ್ತಿ ವಹಿಸಿ ಗಮನಿಸುತ್ತಿದ್ದಾರೆ. ಅಲ್ಲದೇ ಆಯಾ ಜಿಲ್ಲಾಧಿಕಾರಿಗಳಿಗೆ ಮಾನಿಟರಿಂಗ್ ಜವಾಬ್ದಾರಿ ಕೊಡಲಾಗಿದೆ. ಸಿಎಂ ಮನಸ್ಸು ಮಾಡಿದ್ದರಿಂದ ಬಡವರಿಗೆ ಖಾತೆ ಸಿಗುತ್ತಿದ್ದು, ಬ್ಯಾಂಕ್ ಸಾಲ ಪಡೆದುಕೊಳ್ಳಲು ಅನುಕೂಲವಾಗಲಿದೆ ಎಂದರು.