ಜಿಲ್ಲೆ

ಭಾಜಪ ಕೊಟ್ಟ ಭರವಸೆ ಹುಸಿ

ಚಿತ್ರದುರ್ಗ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಜನ ಸಿದ್ಧರಿದ್ದು, ಕಾರ್ಯಕರ್ತರ ಜವಾಬ್ದಾರಿ ಹೆಚ್ಚು ಇದೆ ಎಂದು ಎಐಸಿಸಿ ಕಾರ್ಯದರ್ಶಿ ಸಂಜಯ್‌ದತ್ ಹೇಳಿದರು.

ಪಕ್ಷದ ಜಿಲ್ಲಾ ಕಚೇರಿಯಲ್ಲಿ ಭಾನುವಾರ ಪಕ್ಷದ ಸಭೆಯಲ್ಲಿ ಮಾತನಾಡಿ, ಹೀಗಾಗಿ ಪ್ರತಿ ಮತಗಟ್ಟೆಯಲ್ಲೂ ಸಂಘಟನೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ಕಾರ್ಯಕರ್ತರಿಗೆ, ಮುಖಂಡರಿಗೆ ಸಲಹೆ ನೀಡಿದರು.

ಬಿಜೆಪಿ ಆಡಳಿತದಿಂದ ನಾಡಿಗೆ ದ್ರೋಹ ಆಗಿದ್ದು, ಜನರು ಭ್ರಮನಿರಸರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕೊಟ್ಟ ಭರವಸೆಗಳೆಲ್ಲವೂ ಹುಸಿಯಾಗಿವೆ. ರಾಜ್ಯದಲ್ಲಿ ಭ್ರಷ್ಟ ಸರ್ಕಾರ ಅಧಿಕಾರದಲ್ಲಿದ್ದು, ಅದನ್ನು ಕಿತ್ತೊಗೆಯಲು ಪಣ ತೊಡಬೇಕು ಎಂದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಪಾದಯಾತ್ರೆಯಿಂದ ಪಕ್ಷದ ಕಾರ್ಯಕರ್ತರು, ಮುಖಂಡರಲ್ಲಿ ಉತ್ಸಾಹ ಹೆಚ್ಚಾಗಿದೆ. ದೇಶದಲ್ಲಿ ಬದಲಾವಣೆ ತರಬೇಕು ಎಂಬ ಸಂಕಲ್ಪಕ್ಕೆ ಅನೇಕರು ಬದ್ಧರಾಗಿ ಕೆಲಸ ಮಾಡುತ್ತಿದ್ದಾರೆ. ಇದು ಮುಂಬರುವ ಚುನಾವಣೆಗಳಲ್ಲೂ ಸಂಘಟನಾತ್ಮಕವಾಗಿ ಮುನ್ನುಗ್ಗಲು ಪ್ರೇರೇಪಿಸಿದೆ ಎಂದು ಅಭಿಪ್ರಾಯಪಟ್ಟರು.

ರಾಜ್ಯಸಭೆ ಮಾಜಿ ಸದಸ್ಯ ಎಚ್.ಹನುಮಂತಪ್ಪ ಮಾತನಾಡಿ, ದೇಶವನ್ನು ಮುನ್ನಡೆಸಲು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಅನೇಕ ಜನಪರ ಕೊಡುಗೆಗಳನ್ನು ನೀಡಿರುವ ಪಕ್ಷವಾಗಿದ್ದು, ಪ್ರತಿ ಬೂತ್ ಮಟ್ಟದಿಂದ ಸಂಘಟನೆ ಕೆಲಸವಾಗಬೇಕು. ಇದಕ್ಕೆ ಪ್ರತಿಯೊಬ್ಬರು ಕಂಕಣಬದ್ಧರಾಗಿ ದುಡಿಯಬೇಕು ಎಂದು ಸಲಹೆ ನೀಡಿದರು.

ಪಕ್ಷದ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಮಾಜಿ ಅಧ್ಯಕ್ಷರಾದ ಫಾತ್ಯರಾಜನ್, ಎಂ.ಎ.ಸೇತೂರಾಂ, ಮಾಜಿ ಶಾಸಕ ಎ.ವಿ.ಉಮಾಪತಿ, ಮುಖಂಡರಾದ ಹನುಮಲಿ ಷಣ್ಮುಖಪ್ಪ, ಜೆ.ಜೆ.ಹಟ್ಟಿ ಡಾ.ಬಿ.ತಿಪ್ಪೇಸ್ವಾಮಿ, ಗೀತಾ ನಂದಿನಿಗೌಡ, ಡಿ.ಟಿ.ವೆಂಕಟೇಶ್, ಹಾಲಸ್ವಾಮಿ, ಕೆ.ಅನಂತ್, ಡಿ.ಎನ್.ಮೈಲಾರಪ್ಪ, ಬಾಲಕೃಷ್ಣಯಾದವ್, ಜಯಮ್ಮ ಬಾಲರಾಜ್, ಎನ್.ಡಿ.ಕುಮಾರ್, ಕಾರೇಹಳ್ಳಿ ಉಲ್ಲಾಸ್, ಅಬ್ದುಲ್ಲಾ, ಜಿ.ವಿ.ಮಧುಗೌಡ, ಮಹಮ್ಮದ್ ಚೋಟು ಇತರರಿದ್ದರು.