ಬೆಂಗಳೂರು: ರಾಜಧಾನಿಯ ಪ್ರತಿಷ್ಠಿತ ಲೋಕಸಭಾ ಕ್ಷೇತ್ರಗಳಲ್ಲಿ ಒಂದೆನಿಸಿರುವ ಬೆಂಗಳೂರು ಸೆಂಟ್ರಲ್‌ನಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ ಗೆಲುವು ಸಾಧಿಸಿ ನಾಲ್ಕನೇ ಬಾರಿ ಲೋಕಸಭೆ ಪ್ರವೇಶ ಮಾಡಿದ್ದಾರೆ.
ಜಿದ್ದಾಜಿದ್ದಿ ಸ್ಪರ್ಧೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿನ ಸನಿಹಕ್ಕೆ ಬಂದರೂ, ಕೊನೆಯವರೆಗೂ ಮುನ್ನಡೆ ಕಾಯ್ದುಕೊಳ್ಳದ ಕಾರಣ ಕಮಲ ಪಾಳಯವನ್ನು ಭೇದಿಸಲು ಸಾಧ್ಯವಾಗಲಿಲ್ಲ. ಈ ಬಾರಿ ಗೆದ್ದೇ ತೀರುತ್ತೇವೆಂದು ಪಣ ತೊಟ್ಟಿದ್ದ ಕಾಂಗ್ರೆಸ್, ಮೂವರು ಸಚಿವರ ಕ್ಷೇತ್ರಗಳಿದ್ದರೂ ಪಿ.ಸಿ.ಮೋಹನ್ ಅವರನ್ನು ಸೋಲಿಸಲು ಸಾಧ್ಯವಾಗದ ‘ಕೈ’ಸುಟ್ಟಿಕೊಂಡಿದೆ.
ವಸಂತನಗರದ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಮಂಗಳವಾರ ನಡೆದ ಮತ ಎಣಿಕೆ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಮುನ್ನಡೆ ಭಾರೀ ಕುತೂಹಲ ಕೆರಳಿಸಿತ್ತು. ಆರಂಭಿಕ ಮುನ್ನಡೆ ಕಾಯ್ದುಕೊಂಡಿದ್ದ ಕಾಂಗ್ರೆಸ್‌ನ ಮನ್ಸೂರ್ ಅಲಿ ಖಾನ್ ಒಂದು ಹಂತದಲ್ಲಿ 82 ಸಾವಿರ ಮತಗಳನ್ನು ಪಡೆದು ಗೆಲುವಿನ ನಿರೀಕ್ಷೆ ಮೂಡಿಸಿದ್ದರು. ನಂತರದ ಸುತ್ತುಗಳಲ್ಲೂ ಇದೇ ಮುನ್ನಡೆ ಕಾಯ್ದುಕೊಳ್ಳಲು ವಿಫಲರಾದರು. ಕೊನೆಯ ಸುತ್ತುಗಳಲ್ಲಿ ಪಿ.ಸಿ.ಮೋಹನ್ ತನ್ನ ಎದುರಾಳಿಗಿಂತ ಹೆಚ್ಚು ಮತಗಳನ್ನು ಪಡೆದ ಕಾರಣ ಕಾಂಗ್ರೆಸ್ ಗೆಲುವಿನ ಆಸೆ ಕಮರಿತು.
ಹಾವು-ಏಣಿ ಆಟ ನೆನಪಿಸಿದ ಮುನ್ನಡೆ:
ಸೆಂಟ್ರಲ್ ಲೋಕಸಭಾ ಕ್ಷೇತ್ರದಲ್ಲಿ 8 ವಿಧಾನಸಭಾ ಕ್ಷೇತ್ರಗಳಲಿದ್ದು, ಈ ಪೈಕಿ ಐದರಲ್ಲಿ ಕಾಂಗ್ರೆಸ್ ಹಾಗೂ ಮೂರರಲ್ಲಿ ಬಿಜೆಪಿ ಶಾಸಕರು ಪ್ರತಿನಿಧಿಸಿದ್ದಾರೆ. ಮತದಾನದಲ್ಲಿ ಆಯಾ ಕ್ಷೇತ್ರಗಳಲ್ಲಿ ಆ ಪಕ್ಷಗಳ ಪ್ರಾಬಲ್ಯ ಕಂಡುಬಂದಿದೆ. ಆದರೆ, ಗಾಂಧಿನಗರ ಕ್ಷೇತ್ರದಲ್ಲಿ ಮಾತ್ರ ತದ್ವಿರುದ್ಧ ಮತಗಳು ಚಲಾವಣೆಯಾಗಿವೆ. ವಿಶೇಷವೆಂದರೆ ಈ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಾಜ್ಯ ಸರ್ಕಾರವನ್ನು ಪ್ರತಿನಿಧಿಸುವ ಮೂವರು ಪ್ರಭಾವಿ ಸಚಿವರಿದ್ದರೂ, ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಿಲ್ಲ. ಸರ್ವಜ್ಞನಗರ ಹಾಗೂ ಚಾಮರಾಜಪೇಟೆ ಕ್ಷೇತ್ರ ಪ್ರತಿನಿಧಿಸುವ ಸಚಿವರು ತಮ್ಮ ಪಕ್ಷಕ್ಕೆ ಹೆಚ್ಚಿನ ಲೀಡ್ ಕೊಡಿಸುವಲ್ಲಿ ಸಫಲರಾದರೂ ಗೆಲುವಿಗೆ ಬೇಕಾದ ಮತಗಳನ್ನು ಪಕ್ಷದತ್ತ ಸೆಳೆಯುವಲ್ಲಿ ವಿಫಲರಾಗಿದ್ದಾರೆಂದೇ ಹೇಳಬಹುದು.
ಇದೇ ರೀತಿ ಬಿಜೆಪಿಯ ಮೂವರು ಶಾಸಕರು ತಮ್ಮ ಪಕ್ಷದ ಅಭ್ಯರ್ಥಿಗೆ ಲೀಡ್ ಕೊಡಿಸುವಲ್ಲಿ ಸಫಲರಾಗಿದ್ದಾರೆ. ಸಿ.ವಿ.ರಾಮನ್ ಕ್ಷೇತ್ರದಲ್ಲಿ ಸಾಧಾರಣ ಸಂಖ್ಯೆ ಲೀಡ್ ಬಂದಿದ್ದರೂ, ರಾಜಾಜಿನಗರ ಹಾಗೂ ಮಹದೇವಪುರದಲ್ಲಿ ಹೆಚ್ಚಿನ ಮತಗಳನ್ನು ಕ್ರೊಡೀಕರಿಸಿ ಪಿ.ಸಿ.ಮೋಹನ್ ಗೆಲುವಿನ ನಗೆ ಬೀರಿದ್ದಾರೆ. ಬಿಜೆಪಿ ಅಭ್ಯರ್ಥಿಯು ಹೆಚ್ಚಿನ ಲೀಡ್ ಪಡೆಯುತ್ತಿದ್ದಂತೆ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಮತ ಎಣಕೆ ಕೇಂದ್ರದಿಂದ ಹೊರನಡೆದರು. ಇದರ ಬೆನ್ನಲ್ಲೇ ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಪಕ್ಷ ಹಾಗೂ ಅಭ್ಯರ್ಥಿ ಪರ ಜಯೋಘೋಷ ಮೊಳಗಿಸಿದರು. ವಿಜಯೋತ್ಸವ ಆಚರಿಸಲು ಅವಕಾಶ ಇಲ್ಲದ ಕಾರಣ ಕಾರ್ಯಕರ್ತರು ಪರಸ್ಪರ ಅಭಿನಂದನೆ ಸಲ್ಲಿಸಿ ಗೆಲುವಿಗೆ ಸಂಭ್ರಮಪಟ್ಟರು.
ಗೆಲುವಿನಲ್ಲಿ ಮಹದೇವಪುರ ಪ್ರಮುಖ ಪಾತ್ರ:
ಪಿ.ಸಿ.ಮೋಹನ್ ಅವರ ಗೆಲುವಿನಲ್ಲಿ ಮಹದೇವಪುರ ವಿಧಾನಸಭಾ ಕ್ಷೇತ್ರ ಪ್ರಮುಖ ಪಾತ್ರ ವಹಿಸಿದೆ. ಇಲ್ಲಿ ಅವರು ತಮ್ಮ ಎದುರಾಳಿ ಅಭ್ಯರ್ಥಿ ಕಾಂಗ್ರೆಸ್‌ಗಿಂತ ದುಪ್ಪಟ್ಟು ಮತಗಳನ್ನು ಪಡೆದರಲ್ಲದೆ ಬರೋಬರಿ 1.14 ಲಕ್ಷಕ್ಕಿಂತ ಹೆಚ್ಚು ಲೀಡ್ ಪಡೆಯಲು ಸಫಲರಾಗಿದ್ದಾರೆ. ಈ ಹಿಂದಿನ ಚುನಾವಣೆಗಳಲ್ಲೂ ಮೋಹನ್ ಅವರಿಗೆ ಮಹದೇವಪುರ ಹೆಚ್ಚಿನ ಲೀಡ್ ತಂದುಕೊಟ್ಟಿತ್ತು. ಈ ಬಾರಿಯೂ ಬಿಜೆಪಿ ಗೆಲುವಿಗೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿದೆ.
ಅಭ್ಯರ್ಥಿ ಪಡೆದ ಮತಗಳ ವಿವರ:
ಪಿ.ಸಿ.ಮೋಹನ್, ಬಿಜೆಪಿ - 6,58,915 ಮತಗಳು
ಮನ್ಸೂರ್ ಅಲಿ ಖಾನ್, ಕಾಂಗ್ರೆಸ್ - 6,26,208 ಮತಗಳು
ಗೆಲುವಿನ ಅಂತರ - 32,707 ಮತಗಳು
ನೋಟಾ ಮತಗಳು - 12,126
ಅಂಚೆ ಮತಗಳು - 2,648
ವಿಧಾನಸಭಾ ಕ್ಷೇತ್ರವಾರು ಮತಗಳಿಕೆ ವಿವರ:
ಅಸೆಂಬ್ಲಿ ಕ್ಷೇತ್ರ ಬಿಜಪಿ ಕಾಂಗ್ರೆಸ್
ಸರ್ವಜ್ಞನಗರ 66550 140794
ಸಿ.ವಿ.ಆರ್.ನಗರ 73460 53346
ಶಿವಾಜಿನಗರ 43221 70731
ಶಾಂತಿನಗರ 49846 70184
ಗಾಂಧಿನಗರ 74447 51123
ರಾಜಾಜಿನಗರ 75917 36488
ಚಾಮರಾಜಪೇಟೆ 44163 87116
ಮಹದೇವಪುರ 229632 115586
ಅಂಚೆ ಮತಗಳು 1679 840
ಒಟ್ಟು ಮತಗಳು 658915 626208
ಜನರೊಟ್ಟಿಗೆ ಇದ್ದಲ್ಲಿ ಮತದಾರರು ಕೈ ಹಿಡಿಯುತ್ತಾರೆಂಬ ವಿಶ್ವಾಸ ಮತ್ತೊಮ್ಮೆ ಸಾಬೀತಾಗಿದೆ. ಜತೆಗೆ ಅಭಿವೃದ್ಧಿ ಕಾರ್ಯಗಳೂ ನನ್ನ ಗೆಲುವಿಗೆ ವರವಾಗಿದೆ. ಸತತ 4ನೇ ಬಾರಿ ಜಯ ಸಾಧಿಸಿರುವುದಕ್ಕೆ ಪಕ್ಷದ ಕಾರ್ಯಕರ್ತರು ಹಾಗೂ ಮತದಾರರಿಗೆ ಅಭಿನಂದನೆ ಸಲ್ಲಿಸುವೆ. ಜನರ ಸೇವೆಯಲ್ಲಿ ಸಕ್ರಿಯವಾಗಿರುತ್ತೇನೆಂದು ವಾಗ್ದಾನ ನೀಡುತ್ತೇನೆ.
- ಪಿ.ಸಿ.ಮೋಹನ್, ಬಿಜೆಪಿಯ ವಿಜೇತ ಅಭ್ಯರ್ಥಿ