ಜಿಲ್ಲೆ

ಅಭಿವೃದ್ಧಿ ಕಾರ್ಯಕ್ಕೆ ಬಿಜೆಪಿಗರ ಅಡ್ಡಗಾಲು

ಬಸವರಾಜ ವೀರಪ್ಪ ಗರಗ

ಗಜೇಂದ್ರಗಡ: ಪಟ್ಟಣದಲ್ಲಿ 8 ಎಕರೆ ಸರ್ಕಾರಿ ಗುಡ್ಡದಲ್ಲಿ ತಾಲೂಕು ಕ್ರೀಡಾಂಗಣ ನಿರ್ವಿುಸಲು ಮುಂದಾದರೆ ಅಭಿವೃದ್ಧಿ ಕಾರ್ಯಕ್ಕೆ ಕೈ ಜೋಡಿಸುವ ಬದಲು ಹಿಂದಿನ ಐದು ವರ್ಷ ಅಧಿಕಾರ ನಡೆಸಿದವರು ಈ ಮಣ್ಣು ಎಲ್ಲಿಗೆ ಒಯ್ಯುತ್ತಿರೀ?, ಯಾರು ಪರವಾನಗಿ ಕೊಟ್ಟಿದ್ದಾರೆ? ಎಂದು ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಪಟ್ಟಣದ ಜಿ.ಕೆ. ಬಂಡಿ ಗಾರ್ಡನ್​ನಲ್ಲಿ ಶನಿವಾರ ಆಯೋಜಿಸಿದ್ದ ಗಜೇಂದ್ರಗಡ ಪುರಸಭೆ ವ್ಯಾಪ್ತಿಯ ಉಣಚಗೇರಿ ರಿ.ಸ.ನಂ. 183/1, 183/3ರ ಆಶ್ರಯ ಬಡಾವಣೆಯಲ್ಲಿ ಮಂಜೂರಾದ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಹಾಗೂ ಇ-ಆಸ್ತಿ (ನಮೂನೆ-3) ಉತಾರ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು 2013-2018ವರೆಗಿನ ಅವಧಿಯಲ್ಲಿ ರಾಜ್ಯದಲ್ಲಿ 15 ಲಕ್ಷ ಮನೆಗಳನ್ನು ನಿರ್ಮಾಣ ಮಾಡಿದ್ದರು. ಸದ್ಯ ಮತ್ತೊಮ್ಮೆ ಅವರು ಮುಖ್ಯಮಂತ್ರಿಯಾಗಿದ್ದು, ಈ ಅವಧಿಯ ಒಂದೂವರೆ ವರ್ಷದಲ್ಲಿ ಹಿಂದಿನ ಸರ್ಕಾರದ ಅವಧಿಯಲ್ಲಿ ಮಂಜೂರಾಗಿ ಅರ್ಧಂಬರ್ಧ ಆಗಿರುವ ಆಶ್ರಯ ಮನೆಗಳ ನಿರ್ಮಾಣ ಕಾಮಗಾರಿಗಳನ್ನು ಪೂರ್ಣಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಹೊಸ ಮನೆಗಳ ನಿರ್ವಣಕ್ಕೆ ಮಂಜೂರಾತಿ ನೀಡಿಲ್ಲ. ಸದ್ಯ ಗಜೇಂದ್ರಗಡದ ಪುರಸಭೆ ವ್ಯಾಪ್ತಿಯಲ್ಲಿ ಆಶ್ರಯ ಬಡಾವಣೆಯಲ್ಲಿ ಈ ಹಿಂದೆ ಮಂಜೂರಾಗಿದ್ದ ಫಲಾನುಭವಿಗಳಿಗೆ ಇ-ಆಸ್ತಿ ಉತಾರ ನೀಡಲಾಗುತ್ತಿದೆ. ಇ-ಆಸ್ತಿ ಉತಾರ ಲಭಿಸಿದರೆ ನೀವು ಜಾಗದ ಮಾಲೀಕರಾಗುತ್ತೀರಿ. ಇಲ್ಲದಿದ್ದರೆ ಅದು ಬೇರೆಯವರ ಪಾಲಾಗುವ ಭೀತಿ ಇರುವುದಿಲ್ಲ ಎಂದರು.

ಪುರಸಭೆಯಲ್ಲಿ ಬಹುಮತವಿಲ್ಲದಿದ್ದರೂ ಜಿ.ಎಸ್. ಪಾಟೀಲರು ಅಧ್ಯಕ್ಷರನ್ನು ಆಯ್ಕೆ ಮಾಡಿದ್ದಾರೆ ಎಂದು ಹಲವರು ಮಾತನಾಡಿಕೊಳ್ಳುತ್ತಿದ್ದಾರೆ. ಗಜೇಂದ್ರಗಡದಲ್ಲಿ ಕಲ್ಯಾಣ ಕಾರ್ಯಕ್ರಮಗಳನ್ನು ಮಾಡಲು ಅನುಕೂಲವಾಗಲೆಂಬ ಸದುದ್ದೇಶದಿಂದ ಈ ಕಾರ್ಯ ಮಾಡಿದ್ದೇನೆ. ಅವರೆಲ್ಲ ನನ್ನ ಮೇಲೆ ವಿಶ್ವಾಸವಿಟ್ಟು ಬಂದಿದ್ದಾರೆ. ಇತ್ತೀಚೆಗೆ ಪಟ್ಟಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅಚ್ಚುಕಟ್ಟಾಗಿ ನಡೆಸಲು ಪುರಸಭೆ ಮುಖ್ಯ ಪಾತ್ರ ವಹಿಸಿದೆ. ಗಜೇಂದ್ರಗಡದಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳು ಪ್ರಾರಂಭವಾಗಿವೆ. ಗಜೇಂದ್ರಗಡದ ಸರ್ಕಾರಿ ಆಸ್ಪತ್ರೆಯಲ್ಲಿ ಸೌಲಭ್ಯಗಳು ಮೊದಲಿಗಿಂತ ಈಗ ಸುಧಾರಿಸಿವೆ. ಹೊಸ ಯಂತ್ರೋಪಕರಣಗಳು, ತಜ್ಞ ವೈದ್ಯರು ಬಂದಿದ್ದಾರೆ. ಖನಿಜ ಅಭಿವೃದ್ಧಿ ನಿಗಮದಿಂದ 60 ಲಕ್ಷ ರೂ. ಅನುದಾನ ನೀಡಿದ್ದೇನೆ. ಪಟ್ಟಣದಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪನೆಯಾಗಿದ್ದು, ಶೀಘ್ರದಲ್ಲಿ ಉದ್ಘಾಟನೆ ಆಗಲಿದೆ ಎಂದರು.

ಸಿದ್ದಣ್ಣ ಬಂಡಿ, ಪುರಸಭೆ ಆಶ್ರಯ ಸಮಿತಿ ಸದಸ್ಯ ಎ.ಡಿ. ಕೋಲಕಾರ ಮಾತನಾಡಿದರು. ಕಾರ್ಯಕ್ರಮದಲ್ಲಿ 18 ಹಕ್ಕುಪತ್ರ, 180 (273)ಕ್ಕೂ ಹೆಚ್ಚು ಇ ಉತಾರಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು. ಇದೇ ವೇಳೆ ಆಶ್ರಯ ಸಮಿತಿ ಸದಸ್ಯರಿಗೆ ಫಲಾನುಭವಿಗಳಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಸುಭಾಷ ಮ್ಯಾಗೇರಿ, ಉಪಾಧ್ಯಕ್ಷೆ ಸವಿತಾ ಬಿದರಳ್ಳಿ, ಸ್ಥಾಯಿ ಸಮಿತಿ ಅಧ್ಯಕ್ಷ ಮುದಿಯಪ್ಪ ಮುಧೋಳ, ಸದಸ್ಯರಾದ ಮುರ್ತಜಾ ಡಾಲಾಯತ, ವೆಂಕಟೇಶ ಮುದಗಲ್, ರಾಜು ಸಾಂಗ್ಲಿಕರ, ವಿಜಯಾ ಮಾಳಗಿ, ಕೌಸರ್​ಬಾನು ಹುನಗುಂದ, ಲಕ್ಷ್ಮೀ ಮುಧೋಳ, ನಾಮನಿರ್ದೇಶಿತ ಸದಸ್ಯರಾದ ಬಸವರಾಜ ಹೂಗಾರ, ಮುತ್ತಣ್ಣ ಮ್ಯಾಗೇರಿ, ಉಮೇಶ ರಾಠೋಡ, ರಫೀಕ್ ತೋರಗಲ್, ಮುಖ್ಯಾಧಿಕಾರಿ ಬಸವರಾಜ ಬಳಗಾನೂರ, ಚಂಬಣ್ಣ ಚವಡಿ, ಎಚ್.ಎಸ್. ಸೋಂಪುರ, ಶರಣಪ್ಪ ಬೆಟಗೇರಿ, ಸಿದ್ದಪ್ಪ ಚೋಳಿನ, ಬಿ.ಎಸ್. ಶೀಲವಂತರ, ಯಲ್ಲಪ್ಪ ಬಂಕದ, ಹಸನ್ ತಟಗಾರ, ಎ.ಡಿ. ಕೋಲಕಾರ, ಆರ್.ಎಂ. ರಾಯಬಾಗಿ, ಇತರರಿದ್ದರು.