ತರೀಕೆರೆ: ವ್ಯಕ್ತಿಗಿಂತ ಪಕ್ಷ, ಪಕ್ಷಕ್ಕಿಂತ ದೇಶ ದೊಡ್ಡದೆಂಬ ಧ್ಯೇಯ ಬಿಜೆಪಿ ಹೊಂದಿದೆ ಎಂದು ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ತಾಲೂಕು ಬಿಜೆಪಿ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿ, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಭಾರತಕ್ಕೆ ಜೈ ಎಂಬ ಘೋಷವಾಕ್ಯ ಮೊಳಗುತ್ತಿದ್ದರೂ ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗುವ ತಂಡವಿದೆ. ಅವರ ವಿರುದ್ಧ ರಾಜ್ಯ ಸರ್ಕಾರ ಕ್ರಮಕೈಗೊಂಡಿಲ್ಲ. ಚುನಾವಣಾ ಖರ್ಚಿಗೆ ನಿವೃತ್ತ ಯೋಧ ಪಿಂಚಣಿ ಹಣ ದೇಣಿಗೆ ನೀಡಿದ್ದನ್ನೇ ಅನುಮಾನದಿಂದ ಕಂಡಿರುವ ಜಿಲ್ಲಾಧಿಕಾರಿ ನನಗೆ ನೋಟಿಸ್ ನೀಡಿದ್ದಾರೆ. ಇಂಥ ವ್ಯವಸ್ಥೆಯನ್ನು ಎಲ್ಲರೂ ಗಮನಿಸಬೇಕು ಎಂದು ಹೇಳಿದರು.
ಕಾಂಗ್ರೆಸ್ ಗ್ಯಾರಂಟಿ ಯೋಜನೆ ಮೂಲಕ ಅಧಿಕಾರ ಪಡೆದಿದ್ದರೂ 10.5 ಲಕ್ಷ ಕುಟುಂಬಗಳಿಗೆ ಗೃಹಲಕ್ಷ್ಮಿಯೋಜನೆಯ ಹಣ ಬಂದಿಲ್ಲ. ಸಂಧ್ಯಾಸುರಕ್ಷಾ, ವಿಧವಾ ವೇತನ ಸೇರಿ ಸಾಮಾಜಿಕ ಭದ್ರತಾ ಪಿಂಚಣಿ 4 ತಿಂಗಳಿನಿಂದ ಫಲಾನುಭವಿಗಳಿಗೆ ನೀಡಿಲ್ಲ ಎಂದರು.
ಪುರಸಭೆ ಸದಸ್ಯ ಟಿ.ಎಂ.ಭೋಜರಾಜ್ ಮಾತನಾಡಿ, ಕ್ಷೇತ್ರದಲ್ಲಿ ಕುಟುಂಬ ರಾಜಕಾರಣ ನಡೆಯುತ್ತಿದೆ. ದುರಾಡಳಿತದಿಂದ ಜನ ಬೇಸತ್ತಿದ್ದು, ಚುನಾವಣೆಯಲ್ಲಿ ಸಮರ್ಥ ನಾಯಕತ್ವ ಇರುವ ಬಿಜೆಪಿಯನ್ನು ಬೆಂಬಲಿಸಲಿದ್ದಾರೆ ಎಂದು ಹೇಳಿದರು.
ಮಾಜಿ ಶಾಸಕ ಎಸ್.ಎಂ.ನಾಗರಾಜ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್.ದೇವರಾಜ್ ಶೆಟ್ಟಿ, ಸಿಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಟಿ.ಎಲ್.ರಮೇಶ್, ನಿರ್ದೇಶಕ ಕೆ.ಆರ್.ಆನಂದಪ್ಪ, ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಲ್ಮರುಡಪ್ಪ, ಜೆಡಿಎಸ್ ತಾಲೂಕು ಅಧ್ಯಕ್ಷ ಎಂ.ನರೇಂದ್ರ ಇತರರಿದ್ದರು.