ಜಿಲ್ಲೆ

ತಪ್ಪಾಗಿದ್ದರೆ ದಿಂಗಾಲೇಶ್ವರ ಸ್ವಾಮೀಜಿಗಳ ಕ್ಷಮೆ ಕೇಳಲು ಸಿದ್ಧ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಅವರಿಗೆ ಬೇಜಾರಾಗುವಂತೆ ನಾನು ನಡೆದುಕೊಂಡಿಲ್ಲ. ಹಾಗೇನಾದರೂ ನನ್ನಿಂದ ಬೇಜಾರಾಗಿದ್ದರೆ ದಿಂಗಾಲೇಶ್ವರ ಸ್ವಾಮೀಜಿಗಳ ಕ್ಷಮೆ ಕೇಳಲು ಸಿದ್ಧ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.

ನಗರದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದಿಂಗಾಲೇಶ್ವರ ಸ್ವಾಮೀಜಿಗಳೊಂದಿಗೆ ನನಗೆ ಉತ್ತಮ ಸಂಬಂಧ ಇದೆ. ಹಲವಾರು ಬಾರಿ ಅವರನ್ನು ಭೇಟಿ ಮಾಡಿದ್ದೇನೆ. ಅನೇಕ ಬಾರಿ ಅವರ ಆಶೀರ್ವಾದ ಪಡೆದಿದ್ದೇನೆ. ಶಿರಹಟ್ಟಿ ಪೀಠದ ಬಗ್ಗೆ ನನಗೆ ಶ್ರದ್ಧೆ ಇದೆ ಎಂದು ಹೇಳಿದರು.

ನಾನು ಸಂಸದನಾದ ನಂತರ ಧಾರವಾಡ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಏಳು ವಿಧಾನಸಭೆ ಕ್ಷೇತ್ರದಲ್ಲಿ ಲಿಂಗಾಯತ ಸಮಾಜದವರಿಗೆ ಬಿಜೆಪಿ ಟಿಕೆಟ್ ನೀಡಲಾಗಿತ್ತು. ಈ ಪಕ್ಷದಿಂದ ಯಾವುದೇ ಸಮುದಾಯದವರಿಗೆ ಅನ್ಯಾಯವಾಗಿಲ್ಲ ಎಂದು ಜೋಶಿ ಹೇಳಿದರು.

ಬಿಜೆಪಿಯಲ್ಲಿನ ಭಿನ್ನಾಭಿಪ್ರಾಯಗಳು ಶಮನಗೊಂಡಿದ್ದು, ರಾಯಚೂರು ಕ್ಷೇತ್ರದಲ್ಲಿನ ಅಸಮಾಧಾನ ಬಗೆಹರಿಸುವುದಕ್ಕೆ ಸಂಬಂಧಿಸಿದಂತೆ ಮಾತುಕತೆಗಳು ನಡೆಯುತ್ತಿವೆ ಎಂದು ತಿಳಿಸಿದರು.

ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲಿ ಜಯ ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮುಖಂಡರು ಹತಾಶರಾಗಿ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಕ್ಷುಲ್ಲಕ ಮಾತುಗಳನ್ನು ಆಡುತ್ತಿದ್ದಾರೆ. ಈ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್​ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.