ವಿಜಯಪುರ: ಭೂಸ್ವಾಧೀನ ಪ್ರಕ್ರಿಯೆ, ಪುನರ್ ವಸತಿ ಮತ್ತು ಪುನರ್ ನಿರ್ಮಾಣ ಸೇರಿದಂತೆ ಕೃಷ್ಣಾ ಕೊಳ್ಳದ ನೀರಾವರಿ ಯೋಜನೆಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವಲ್ಲಿ ಬಿಜೆಪಿ ಕೊಡುಗೆ ಅಪಾರ ಎಂದು ಬಿಜೆಪಿ ವಕ್ತಾರ ಸುರೇಶ ಬಿರಾದಾರ ತಿಳಿಸಿದರು.
ಕೃಷ್ಣೆಗೆ ಕಾಂಗ್ರೆಸ್ ಕೊಡುಗೆ ಏನು? ಎಂದು ಪ್ರಶ್ನಿಸಿರುವ ಕಾಂಗ್ರೆಸ್ ನಾಯಕರಿಗೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅಭಿವೃದ್ಧಿ ಕಾರ್ಯಗಳ ಮೂಲಕ ತಿರುಗೇಟು ನೀಡಿದ ಅವರು, ಈ ಹಿಂದಿನ ಬಿಜೆಪಿ ಆಡಳಿತಾವಧಿಯಲ್ಲಿ ಬಿ.ಎಸ್. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ನೀರಾವರಿ ಯೋಜನೆಗಳಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಆದರೂ ಕಾಂಗ್ರೆಸ್‌ನ ಕೆಲವು ನಾಯಕರು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಕೃಷ್ಣೆ ಹೆಸರಲ್ಲಿ ಆಣೆ ಪ್ರಮಾಣ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈ ಹಿಂದೆ 2013ರಲ್ಲೂ ನುಡಿದಂತೆ ನಡೆಯಲಿಲ್ಲ, ಈಗಲೂ ನಡೆಯುತ್ತಿಲ್ಲ ಎಂದರು.
ಕಾಂಗ್ರೆಸ್ ನಾಯಕರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಎಂಬುದಕ್ಕೆ ಕೃಷ್ಣಾ ಕೊಳ್ಳದ ನೀರಾವರಿ ಯೋಜನೆಗಳೇ ಸಾಕ್ಷಿ. ಕೃಷ್ಣಾ ನ್ಯಾಯಾಧಿಕರಣ 2012-13 ರಲ್ಲಿ ಪ್ರಕಟಗೊಂಡಾಗ ಬಿಜೆಪಿ ಸರ್ಕಾರ ಸುಮಾರು 17200 ಕೋಟಿ ರೂಪಾಯಿ ಅನುಮೋದನೆ ನೀಡಿ 130 ಟಿಎಂಸಿ ನೀರು ಬಳಸಲು ಆಡಳಿತಾತ್ಮಕ ಅನುಮೋದನೆ ಕೂಡ ನೀಡಿತು. ಆದರೆ, 2013 ರಲ್ಲಿ ಸಿದ್ದರಾಮಯ್ಯ ಹೊಸಪೇಟೆಯಿಂದ ಕೂಡಲ ಸಂಗಮದವರೆಗೆ ಪಾದಯಾತ್ರೆ ನಡೆಸಿ ಕೃಷ್ಣಾ ಕೊಳ್ಳದ ನೀರಾವರಿ ಯೋಜನೆಗೆ ಪ್ರತಿ ವರ್ಷ ಹತ್ತು ಸಾವಿರ ಕೋಟಿಯಂತೆ ಒಟ್ಟು 50 ಸಾವಿರ ಕೋಟಿ ಖರ್ಚು ಮಾಡುವುದಾಗಿ ಆಶ್ವಾಸನೆ ಕೊಟ್ಟಿದ್ದರು. ಸಂಗಮನಾಥನ ಮೇಲೆ ಆಣೆ ಪ್ರಮಾಣ ಕೂಡ ಮಾಡಿದ್ದರು. ನಂತರ ಅಧಿಕಾರಕ್ಕೆ ಬರುತ್ತಿದ್ದಂತೆ ನುಡಿದಂತೆ ನಡೆಯಲಿಲ್ಲ ಎಂದರು.
ಕಾಂಗ್ರೆಸ್ ಸರ್ಕಾರ ಮುಳುಗಡೆ ಸಂತ್ರಸ್ತರಿಗೆ ಪರಿಹಾರ ಕೂಡ ನೀಡಲಿಲ್ಲ. ಮುಳುಗಡೆ ಹಳ್ಳಿಗಳನ್ನು ಸ್ಥಳಾಂತರ ಕೂಡ ಮಾಡಲಿಲ್ಲ. ಸುಮಾರು 14 ಹಳ್ಳಿಗಳು ಬಬಲೇಶ್ವರ ಕ್ಷೇತ್ರಕ್ಕೆ ಬರಲಿದ್ದು ಅವುಗಳಿಗೆ ಪರಿಹಾರ ಸಹ ಕೊಡಲಿಲ್ಲ. ಹೀಗಾಗಿ ಪರಿಹಾರ ಕೊಡಲು ರಾಜ್ಯದಲ್ಲಿ ಮತ್ತೆ ಬಿಜೆಪಿಯೇ ಅಧಿಕಾರಕ್ಕೆ ಬರಬೇಕಾಯಿತು. ಬಸವರಾಜ ಬೊಮ್ಮಾಯಿ ಅವರು ಭೂ ಸ್ವಾಧೀನ ಪ್ರಕ್ರಿಯೆ ಆರಂಭಿಸಿದರು. ಸುಮಾರು 75 ಸಾವಿರ ಎಕರೆ ಜಮೀನು ಭೂಸ್ವಾಧೀನ ಪಡಿಸಲು ಪ್ರತಿ ಎಕರೆಗೆ 24 ಲಕ್ಷ ಪರಿಹಾರ ಘೋಷಿಸಿದರು. ಮಾತ್ರವಲ್ಲ, ಈ ಪರಿಹಾರ ಕಡಿಮೆ ಎನಿಸಿದರೆ ಕೋರ್ಟ್‌ಗೆ ಹೋಗಲು ಅನುಮತಿ ಸಹ ನೀಡಿದರು. ಇದೆಲ್ಲ ಬಿಜೆಪಿ ಸಾಧನೆ ಅಲ್ಲವೇ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಸುಳ್ಳು ಭರವಸೆ ನೀಡಿಯೇ ಅಧಿಕಾರಕ್ಕೆ ಬಂದಿದೆ. ಹೀಗಂತ ಗೋವಿಂದ ಕಾರಜೋಳ ಅವರು ಹೇಳಿದ್ದು ಸತ್ಯ ಎಂದ ಸುರೇಶ ಬಿರಾದಾರ, ಬಜೆಟ್‌ನಲ್ಲಿ ನೀರಾವರಿ ಇಲಾಖೆಗೆ ಎಷ್ಟು ಅನುದಾನ ಇಟ್ಟಿದ್ದೀರಿ? ಎಂದು ಪ್ರಶ್ನಿಸಿದರಲ್ಲದೇ ಸುಮಾರು 5 ಸಾವಿರ ಕೋಟಿ ಅನುದಾನ ಘೋಷಿಸಿದ್ದಾಗಿ ಹೇಳುವ ಕಾಂಗ್ರೆಸ್ ಅದರಲ್ಲಿ ಈವರೆಗೆ ಎಳ್ಳಷ್ಟೂ ಬಳಸಿಲ್ಲ ಎಂದರು.
ಬೊಮ್ಮಾಯಿ ಸರ್ಕಾರದಲ್ಲಿ ನೀರಾವರಿ ಮಂತ್ರಿಯಾಗಿ ಗೋವಿಂದ ಕಾರಜೋಳ ಅನೇಕ ಕಾರ್ಯ ಕೈಗೊಂಡಿದ್ದಾರೆ. ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಜಾರಿಗೊಳಿಸಿದ್ದಾರೆ. ಇದೇ ಯೋಜನೆಗಾಗಿ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅನೇಕ ಬಾರಿ ಸಿದ್ದರಾಮಯ್ಯ ಮಾನವಿ ಮಾಡಿದ್ದರೂ ಅನುದಾನ ಕೊಟ್ಟಿರಲಿಲ್ಲ. ಆದರೆ, ಗೋವಿಂದ ಕಾರಜೋಳ ಅವರು ಅಂದಾಜು 3 ಸಾವಿರ ಕೋಟಿ ವೆಚ್ಚದ ಯೋಜನೆಗೆ ಅನುಮೋದನೆ ನೀಡಿ ಕಾರ್ಯಗತಗೊಳಿಸಿದರು. ಪೀರಾಪೂರ ಬೂದಿಹಾಳ ಏತ ನೀರಾವರಿ ಯೋಜನೆಗೆ ಅನುದಾನ ನೀಡಿದರು. ಎನ್‌ಟಿಪಿಸಿ, ವಿಮಾನ ನಿಲ್ದಾಣ, ರೈಲ್ವೆ ಕ್ಷೇತ್ರದ ಅಭಿವೃದ್ಧಿ ಆಗಿದ್ದೇ ಗೋವಿಂದ ಕಾರಜೋಳ ಮತ್ತು ಸಂಸದ ರಮೇಶ ಜಿಗಜಿಣಗಿ ಅವರ ಪರಿಶ್ರಮದ ಫಲ ಎಂದರು.
ಕೆರೆ ತುಂಬುವ ಯೋಜನೆಗೆ ತಿಕೋಟಾದಲ್ಲಿ ಚಾಲನೆ ಕೊಟ್ಟಿದ್ದು ಯಡಿಯೂರಪ್ಪ ಅವರು. ಆದರೆ ಬಳಿಕ ಬಂದ ಕಾಂಗ್ರೆಸ್ ಈ ಯೋಜನೆಗಳಿಗೆ ಕೊಟ್ಟ ಅನುದಾನವೆಷ್ಟು? ಎಂದು ಪ್ರಶ್ನಿಸಿದರು.
ಉಚಿತ ಯೋಜನೆಗಳ ಹೆಸರಿನಲ್ಲಿ ಜನರ ಮೇಲೆ ತೆರಿಗೆ ಭಾರ ವಿಧಿಸಲಾಗುತ್ತಿದೆ. ಜನರು ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗುತ್ತಿದೆ. ಸುಳ್ಳು ಹೇಳಿ ಅಧಿಕಾರಕ್ಕೆ ಬರುವವರು ನೀವು ಎಂಬುದು ಜನರಿಗೆ ಗೊತ್ತಾಗಿದೆ. ಹೀಗಾಗಿ ಜನ ಲೋಕಸಭೆ ಚುನಾವಣೆಯಲ್ಲಿ ತಮಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ದೇಶದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಖಂಡರಾದ ವಿಜುಗೌಡ ಪಾಟೀಲ, ಭೀಮಾಶಂಕರ ಹದನೂರ, ಮಲ್ಲಿಕಾರ್ಜುನ ಜೋಗೂರ, ವಿಜಯ ಜೋಶಿ ಮತ್ತಿತರರಿದ್ದರು.