ಜಿಲ್ಲೆ

ಜೆಡಿಎಸ್ ಮುಗಿಸಲು ಬಿಜೆಪಿ ಪ್ರಯತ್ನ

ಮಂಜುನಾಥ ತಿಮ್ಮಯ್ಯ

ಮೈಸೂರು: ಲೋಕಸಭಾ ಚುನಾವಣೆ ಸೀಟು ಹಂಚಿಕೆ ಗಮನಿಸಿದರೆ ಜೆಡಿಎಸ್ ಪಕ್ಷವನ್ನು ಬಿಜೆಪಿ ಮುಗಿಸಲು ಹೊರಟಂತೆ ಕಾಣುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹೇಳಿದರು.


ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಸೀಟು ಹಂಚಿಕೆ ಸ್ವ್ಯಾಪಿಂಗ್ ಸಿಸ್ಟಂ ಆಗಿದೆ. ತುಮಕೂರು, ಕೋಲಾರದಲ್ಲಿ ಬಿಜೆಪಿ ಅಭ್ಯರ್ಥಿಗಳು ಜೆಡಿಎಸ್ ಚಿಹ್ನೆಯಡಿ ಸ್ಪರ್ಧಿಸಲು ಹೊರಟಿದ್ದಾರೆ. ಹೀಗೆ ಮಾಡಿ ಜೆಡಿಎಸ್ ಪಕ್ಷವನ್ನು ಬಿಜೆಪಿ ಮುಗಿಸಲು ಹೊರಟಿದೆ. ಈಗಾಗಲೇ ಮೈತ್ರಿ ಬಗ್ಗೆ ಜೆಡಿಎಸ್ ಕಾರ್ಯಕರ್ತರು ಅಸಮಾಧಾನ ಹೊರ ಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಜನರೇ ಇವರಿಗೆ ಉತ್ತರ ಕೊಡುತ್ತಾರೆ ಎಂದು ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.


ಲೋಕಸಭಾ ಚುನಾವಣೆಯಲ್ಲಿ 28ಕ್ಕೆ 28 ಸ್ಥಾನವನ್ನು ಗೆಲ್ಲುವುದಾಗಿ ಬಿಜೆಪಿಯವರು ಹೇಳುತ್ತಿದ್ದಾರೆ. ಅದು ಸಾಧ್ಯವಿಲ್ಲ. ಬಿಜೆಪಿ ಅವರು 7 ರಿಂದ 8 ಕ್ಷೇತ್ರಗಳಲ್ಲಿ ಜಯ ಗಳಿಸುವುದೇ ಕಷ್ಟ. ಎರಡು ಅಂಕಿಯೂ ದಾಟಲ್ಲ. ಕಾಂಗ್ರೆಸ್ 20 ರಿಂದ 22 ಸ್ಥಾನದಲ್ಲಿ ಗೆಲುವು ದಾಖಲಿಸಲಿದೆ ಎಂದರು.


ಗ್ಯಾರಂಟಿ ಯೋಜನೆಗಳಿಗೆ ಎಸ್‌ಸಿಪಿ, ಟಿಎಸ್‌ಪಿ ದಲಿತರ ಅನುದಾನ ಬಳಕೆ ಮಾಡಲಾಗಿದೆ ಎಂಬುದು ಬಿಜೆಪಿಯವರು ಸೃಷ್ಟಿಸಿರುವ ಹಸಿ ಸುಳ್ಳು. ಬಿಜೆಪಿಯವರಿಗೆ ಎಸ್‌ಇಪಿ, ಟಿಎಸ್‌ಪಿ ಅಂದರೆ ಏನು ಅಂತಾನೇ ಗೊತ್ತಿಲ್ಲ. ಚುನಾವಣೆ ಬಂದಿದ್ದರಿಂದ ಪರಿಶಿಷ್ಟರ ಮೇಲೆ ಎಲ್ಲಿಲ್ಲದ ಒಲವು ಬಂದಿದೆ ಎಂದು ಕುಟುಕಿದರು.


ಹಿಂದಿನ ಬಿಜೆಪಿ ಸರ್ಕಾರದಲ್ಲಿ ಎಷ್ಟು ಹಣ ಮೀಸಲಿಟ್ಟಿದ್ದೀರಿ ಎಂದು ಪ್ರಶ್ನಿಸಿದ ಅವರು, ಬಿಜೆಪಿ ಸರ್ಕಾರದಲ್ಲಿ ಎಸ್ಸಿ-ಎಸ್ಟಿ ಮಕ್ಕಳಿಗೆ ನೀಡುತ್ತಿದ್ದ ವಿದ್ಯಾರ್ಥಿವೇತನವನ್ನೂ ಸ್ಥಗಿತಗೊಳಿಸಲಾಗಿತ್ತು ಎಂದು ಹರಿಹಾಯ್ದರು.


ದೇಶದಲ್ಲಿ ಮೊಟ್ಟ ಮೊದಲು ಎಸ್‌ಇಪಿ, ಟಿಎಸ್‌ಪಿ ಯೋಜನೆಯನ್ನು ಜಾರಿಗೆ ತಂದ ಕೀರ್ತಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ. 2017ರಲ್ಲಿ ಸುಮಾರು 17 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದರು. 2024ರಲ್ಲಿ 39 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.


ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ತಮಿಳುನಾಡಿಗೆ ನೀರು ಬಿಡುವುದನ್ನು ನಿಲ್ಲಿಸಲು ರಾಜ್ಯದ ಬಿಜೆಪಿ ಸಂಸದರು ಪ್ರಯತ್ನಿಸಬೇಕು. ಇದನ್ನು ಬಿಟ್ಟು ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಜನರು ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಲ್ಲ. ರಾಜ್ಯ ಸರ್ಕಾರ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಕೊರತೆಯಾಗದಂತೆ ಕ್ರಮ ವಹಿಸಲಿದೆ ಎಂದರು.


ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದೆ. ಜಲಾಶಯಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿದಿದೆ. ಮಳೆಗಾಲ ಬರುವುದಕ್ಕೆ ಇನ್ನೂ ಎರಡ್ಮೂರು ತಿಂಗಳಿದೆ. ರಾಜ್ಯದ ಎಲ್ಲ ಜಲಾಶಯಗಳಲ್ಲಿ ಹಾಲಿ ಲಭ್ಯ ಇರುವುದು 14 ಟಿಎಂಸಿ ನೀರು ಮಾತ್ರ. ಕುಡಿಯುವ ನೀರಿಗೆ ತತ್ವಾರ ಉಂಟಾಗುವ ಸಾಧ್ಯತೆ ಇದೆ ಎಂದರು.


ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಬಗ್ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಆದರೆ, ಅವರ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರೇ ‘ಗೋ ಬ್ಯಾಕ್ ಶೋಭಾ ಅಭಿಯಾನ’ ಆರಂಭಿಸಿದ್ದಾರೆ. ಕಳೆದ 5 ವರ್ಷಗಳಲ್ಲಿ 6 ಬಾರಿಯೂ ಕ್ಷೇತ್ರಕ್ಕೆ ಭೇಟಿ ನೀಡಿಲ್ಲ. ದಿಶಾ ಸಭೆಯಲ್ಲೂ ಭಾಗವಹಿಸಿಲ್ಲ ಎಂದು ಟೀಕಿಸಿದರು.