ಬೆಂಗಳೂರು ಗ್ರಾಮಾಂತರ: ಭಾರತೀಯ ಜನತಾ ಪಕ್ಷ ಶಿಸ್ತಿಗೆ ಹೆಸರಾಗಿದೆ. ಆದ್ದರಿಂದ ಪಕ್ಷದ ತತ್ವ, ಸಿದ್ಧಾಂತವನ್ನು ಒಪ್ಪಿ ಬರುವವರಿಗೆ ಪಕ್ಷ ಸ್ವಾಗತಿಸುತ್ತದೆ ಎಂದು ಪೌರಾಡಳಿತ ಮತ್ತು ಸಣ್ಣಕೈಗಾರಿಕೆ ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ಗರುಡಾಚಾರ್‌ಪಾಳ್ಯದ ಸಚಿವರ ಗೃಹಕಚೇರಿಯಲ್ಲಿ ಶುಕ್ರವಾರ ಹೊಸಕೋಟೆ ತಾಲೂಕು ಸೂಲಿಬೆಲೆ ಹೋಬಳಿ ಲಕ್ಕೊಂಡಹಳ್ಳಿ ಗ್ರಾಮದ ಮುಖಂಡರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದರು. ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸುಭದ್ರ ಆಡಳಿತ ನೀಡುತ್ತಿದ್ದು, ಎಲ್ಲ ಕಡೆಗಳಲ್ಲೂ ಪಕ್ಷದ ಪರ ಅಲೆ ಇದೆ, ಮುಂದಿನ ಸಾರ್ವತ್ರಿಕ ಚುನಾವಣೆಗಳಲ್ಲೂ ಬಿಜೆಪಿ ಅಧಿಕಾರ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯಾವುದೇ ಗೊಂದಲಗಳಿಲ್ಲ: ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕ್ಷೇತ್ರಕ್ಕೆ ಸೂಕ್ತ ಅನುದಾನ ನೀಡಲಿಲ್ಲ ಎಂಬ ಕಾರಣಕ್ಕೆ ಬೇಸತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಬಂದೆ. ಆ ವೇಳೆ ಏಕಾಏಕಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರಿಂದ ಎರಡೂ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಗೊಂದಲ ಏರ್ಪಟ್ಟಿತ್ತು. ಈಗ ಎಲ್ಲವೂ ಸರಿಯಾಗಿದೆ, ನನ್ನ ಬೆಂಬಲಿಗರು, ಹಿತೈಷಿಗಳು ನನ್ನ ಜತೆಯಲ್ಲಿಯೇ ಇದ್ದಾರೆ, ಕೆಲವು ಕಾರಣಾಂತರಗಳಿಂದ ದೂರವಾಗಿದ್ದ ಪ್ರಮುಖ ಮುಖಂಡರೆಲ್ಲರೂ ಈಗ ನನ್ನ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ. ಪ್ರಸ್ತುತ ಸನ್ನಿವೇಶದಲ್ಲಿ ಕ್ಷೇತ್ರದಲ್ಲಿ ಪಕ್ಷದಲ್ಲಿನ ಗೊಂದಲ, ಬಿನ್ನಾಭಿಪ್ರಾಯಗಳೆಲ್ಲ ದೂರವಾಗಿದ್ದು, ಎಲ್ಲರೂ ಪಕ್ಷ ಸಂಘಟನೆಗೆ ಶ್ರಮಿಸುತ್ತಿದ್ದಾರೆ ಎಂದು ಸಚಿವರು ತಿಳಿಸಿದರು.
ಅಮೃತ ಘಳಿಗೆಗೆ ಸಾಕ್ಷಿಯಾಗೋಣ: ದೇಶದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಮೃತಘಳಿಗೆಯಲ್ಲಿ ನಾವೆಲ್ಲರೂ ಭಾಗಿಯಾಗೋಣ, ಹರ್‌ಘರ್ ತಿರಂಗಾ ಅಭಿಯಾನ ಯಶಸ್ವಿಗೊಳಿಸೋಣ, ಪ್ರತಿ ಭಾರತೀಯನೂ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಭಾರತಾಂಭೆಗೆ ಗೌರವ ಸಲ್ಲಿಸೋಣ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನವನ್ನು ಸ್ಮರಿಸೋಣ ಎಂದು ಸಚಿವರು ಕರೆ ನೀಡಿದರು.
ಆನೆ ಬಲಬಂದಾಗಿದೆ: ಹೊಸಕೋಟೆ ಕ್ಷೇತ್ರದ ಎಲ್ಲ ಹೋಬಳಿಗಳಿಂದಲೂ ಸಾವಿರಾರು ಸಂಖ್ಯೆಯಲ್ಲಿ ವಿವಿಧ ಪಕ್ಷದ ತೊರೆದು ಮುಖಂಡರು ಬಿಜೆಪಿ ಸೇರ್ಪಡೆಯಾಗುತ್ತಿರುವುದು ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ, ಪಕ್ಷದ ತ್ವ ಸಿದ್ಧಾಂತ ಹಾಗೂ ಸಚಿವರ ಅಭಿವೃದ್ಧಿ ಕಾರ್ಯ ಮೆಚ್ಚಿ ಕಾರ್ಯಕರ್ತರು ಪಕ್ಷಕ್ಕೆ ಬರುತ್ತಿದ್ದಾರೆ, ಸಚಿವರ ಮಾರ್ಗದರ್ಶನದಲ್ಲಿ ಎಲ್ಲರ ಒಗ್ಗೂಡಿ ಕ್ಷೇತ್ರದಲ್ಲಿ ಪಕ್ಷದ ಬಲವರ್ಧನೆಗೆ ಕೆಲಸ ಮಾಡುತ್ತೇವೆ ಎಂದು ಬಿಬಿಎಂಪಿ ಮಾಜಿ ಸದಸ್ಯ ನಿತೀಶ್‌ಪುರುಷೋತ್ತಮ್ ಹೇಳಿದರು.
ಪಕ್ಷ ಸೇರ್ಪಡೆ: ಸೂಲಿಬೆಲೆ ಹೋಬಳಿ ಲಕ್ಕೊಂಡನಹಳ್ಳಿ ಗ್ರಾಮದ ಮುಖಂಡರಾದ ರಾಮಮೂರ್ತಿ, ನಾಗರಾಜು, ದೇವರಾಜು, ನಾರಾಯಣಸ್ವಾಮಿ,ಸುರೇಶ್,ಲೋಕೇಶ್, ವೆಂಕಟೇಶ್, ಹರೀಶ್ ಹಾಗೂ ಸೊನ್ನಳ್ಳಿಪುರ ಗ್ರಾಮದ ಮುಖಂಡರಾದ ನಾಗರಾಜು, ನಟೇಶ್, ಅಂಜಿನಪ್ಪ, ವಸಂತ್ ಕುಮಾರ್, ಆನಂದಪ್ಪ ಮತ್ತಿತರರು ಸ್ವಾಭಿಮಾನಿ ಪಕ್ಷ ಹಾಗೂ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದರು.