ಚಿಕ್ಕನಾಯಕನಹಳ್ಳಿ
ಹಲವು ದಿನಗಳಿಂದ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬದಲಾಗುತ್ತಾರೆ ಎಂದು ಎಲ್ಲೆಡೆ ಹರಿದಾಡುತ್ತಿರುವ ಸುದ್ದಿ ಸತ್ಯಕ್ಕೆ ದೂರವಾದುದು. ಈ ಕ್ಷೇತ್ರದ ಅಧಿಕೃತ ಅಭ್ಯರ್ಥಿ ನಾನೇ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಸ್ಪಷ್ಟಪಡಿಸಿದರು.
ರಾಜ್ಯ ಹೆದ್ದಾರಿ ಯೋಜನೆಯಡಿ 23 ಕೋಟಿ ವೆಚ್ಚದಲ್ಲಿ ಭರಣಾಪುರದಿಂದ ಲಕ್ಷ್ಮೀಪುರಕ್ಕೆ ನಿರ್ಮಾಣಗೊಳ್ಳಲಿರುವ ಸರ್ವಋತು ರಸ್ತೆ ಕಾಮಾಗಾರಿಗೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.
ಮಾಧುಸ್ವಾಮಿ ಕಾಂಗ್ರೆಸ್ ಸೇರುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಅದೇ ರೀತಿ ಚಿ.ನಾ.ಹಳ್ಳಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಬದಲಾಗುತ್ತಾರೆ ಎಂಬ ವದಂತಿಗಳು ಹರಡಿವೆ. ಇಂತಹ ಯಾವುದೇ ಬೆಳವಣಿಗೆಗಳು ನಡೆದಿಲ್ಲ. ಈ ಕ್ಷೇತ್ರದಿಂದ ಬಿಜೆಪಿಯ ಅಧಿಕೃತ ಅಭ್ಯರ್ಥಿ ನಾನೇ. ಕಾರ್ಯಕರ್ತರು ಮತ್ತು ಮತದಾರರು ಗೊಂದಲಕ್ಕೀಡಾಗುವುದು ಬೇಡ ಎಂದು ಮನವಿ ಮಾಡಿದರು.
ಬಿಜೆಪಿ ಅಭ್ಯರ್ಥಿ ನಾನೇ ಎಂದು ಹೇಳಿಕೊಂಡು ಒಬ್ಬರು ತಿರುಗುತ್ತಿದ್ದಾರೆ. ಅವರ ಮಾತಿನಲ್ಲಿ ಹುರುಳಿಲ್ಲ. ನಾಳೆ ಸಿಎಂ ಬಸವರಾಜ ಬೊಮ್ಮಯಿ ಅವರಿಗೂ ಟಿಕೆಟ್ ಇಲ್ಲ ಎಂದು ಹಬ್ಬಿಸಿದರೂ ಆಶ್ಚರ್ಯ ಪಡಬೇಕಿಲ್ಲ. ದೇವೇಗೌಡ, ಕುಮಾರಸ್ವಾಮಿ ನನ್ನ ವಿರುದ್ಧ ಕೆಲಸ ಮಾಡಿದ್ದರೂ ನನ್ನನ್ನು ಸೋಲಿಸಲಾಗಲಿಲ್ಲ. ಇನ್ನು ಇವರು ಯಾವ ಲೆಕ್ಕ ಎಂದು ಮಾಜಿ ಶಾಸಕ ಕಿರಣ್‌ಕುಮಾರ್ ಹೆಸರೇಳದೆ ಕುಟುಕಿದರು.