ಮೈಸೂರು: ರಾಷ್ಟ್ರ ವಿಭಜನೆಯ ಕಿಡಿ ಹೊತ್ತಿಸಿದ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಅವರನ್ನು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿ ಬಿಜೆಪಿ ಯುವ ಮೋರ್ಚಾದಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.
ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ನಗರ ಬಿಜೆಪಿ ಕಾರ್ಯಕಾರಿಣಿ ಸಭೆಯ ಬಳಿಕ ಹೊರಗೆ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಡಿ.ಕೆ.ಸುರೇಶ್ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನಗರಾಧ್ಯಕ್ಷ ಹಾಗೂ ಮಾಜಿ ಶಾಸಕ ಎಲ್.ನಾಗೇಂದ್ರ ಮಾತನಾಡಿ, ಸಂಸದ ಡಿ.ಕೆ.ಸುರೇಶ್ ಅವರು ದೇಶವನ್ನು ಒಡೆಯುವ ಮಾತನ್ನಾಡುತ್ತಿದ್ದಾರೆ. ಇವರ ಹೇಳಿಕೆ ರಾಷ್ಟ್ರ ವಿರೋಧಿಯಾಗಿರುವುದರಿಂದ ದೇಶ ದ್ರೋಹದ ಪ್ರಕರಣ ದಾಖಲಿಸಬೇಕು. ಅಲ್ಲದೆ, ಬೆಂಗಳೂರು ಗ್ರಾಮಾಂತರದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಶಾಂತಿ ಉಂಟು ಮಾಡುವ ಹೇಳಿಕೆಗಳನ್ನು ನೀಡಲಾಗುತ್ತಿದೆ. ಒಂದು ಕೋಮನ್ನು ಮಾತ್ರ ಓಲೈಕೆ ಮಾಡಿ ಅಸಂಖ್ಯಾತ ಹಿಂದುಗಳ ಭಾವನೆಗೆ ಧಕ್ಕೆ ಉಂಟು ಮಾಡಲಾಗುತ್ತದೆ. ಇದು ಕಾಂಗ್ರೆಸ್ ನಾಯಕರ ಪರಿಪಾಠವಾಗಿದ್ದು, ಜನರು ತಕ್ಕ ಪಾಠ ಕಲಿಸಬೇಕು ಎಂದರು.
ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಎಂ.ಜೆ.ಕಿರಣ್‌ಗೌಡ, ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಂ.ರಘು, ನಗರಪಾಲಿಕೆ ಮಾಜಿ ಸದಸ್ಯರಾದ ಬಿ.ವಿ.ಮಂಜುನಾಥ್, ಸುಬ್ಬಯ್ಯ, ವಿದ್ಯಾ ಅರಸ್, ಮುಖಂಡರಾದ ಸಂತೋಷ್‌ಕುಮಾರ್, ಭರತ್‌ಕುಮಾರ್, ಪುನೀತ್‌ಕುಮಾರ, ರಮೇಶ, ಸಚಿನ್, ಮಧು, ಕಾರ್ತಿಕ್ ಮರಿಯಪ್ಪ, ಧನರಾಜ್, ವೇದಮೂರ್ತಿ, ಹೇಮಂತ್‌ಗೌಡ, ಮಹಿಳಾ ಮೋರ್ಚಾ ಪದಾಧಿಕಾರಿಗಳು ಭಾಗಿಯಾಗಿದ್ದರು.