ಮಂಡ್ಯ: ನಗರದ ಹೊರವಲಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ವಿರೋಧಿ ಟಿಪ್ಪು ಸುಲ್ತಾನ್‌ಗೆ ಸಂಬಂಧಿಸಿದಂತೆ ವಿಚಾರಗೋಷ್ಠಿ ಆಯೋಜನೆಗೆ ಅವಕಾಶ ನೀಡಬಾರದೆಂದು ಬಿಜೆಪಿ ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಮನವಿ ಸಲ್ಲಿಸಿದರು.
ನಗರದ ಡಿಸಿ ಕಚೇರಿ ತೆರಳಿದ ಕಾರ್ಯಕರ್ತರು, ಟಿಪ್ಪುಸುಲ್ತಾನ್ ಕನ್ನಡ ವಿರೋಧಿಯಾಗಿದ್ದು, ಆತ ತನ್ನ ಆಡಳಿತಾವಧಿಯಲ್ಲಿ ನಾಡಿನ ಜನರ ಮೇಲೆ ಬಲವಂತವಾಗಿ ಪರ್ಷಿಯಾ ಭಾಷೆಯನ್ನು ಹೇರಿ ಜಾರಿಗೆ ತಂದಿರುವುದನ್ನು ಇತಿಹಾಸದ ಪುಟಗಳು ಹೇಳುತ್ತಿವೆ. ಇತ್ತೀಚಿನ ದಿನಗಳಲ್ಲಿ ಆತನ ಮತಾಂಧತೆ ಹಾಗೂ ಕನ್ನಡ ವಿರೋಧಿ ನಿಲುವಿನ ಕುರಿತು ವ್ಯಾಪಕವಾದ ಚರ್ಚೆ ನಡೆದಿದ್ದು, ಆತನೊಬ್ಬ ಕನ್ನಡ ದ್ವೇಷಿ ಹಾಗೂ ಹಿಂದು ವಿರೋದಿ ಮತಾಂಧನೆಂಬುದು ಮತ್ತಷ್ಟು ಬಹಿರಂಗವಾಗಿದೆ. ಆ ಮೂಲಕ ಆತ ಅತ್ಯಂತ ವಿವಾದಾಸ್ಪದ ವ್ಯಕ್ತಿಯಾಗಿ ಹೊರಹೊಮ್ಮಿರುತ್ತಾನೆ. ಇಂತಹ ವ್ಯಕ್ತಿಯ ವಿಚಾರಗೋಷ್ಠಿಯಲ್ಲಿ ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎನ್ನುವ ಮಾಹಿತಿ. ನುಡಿಜಾತ್ರೆ ಜಿಲ್ಲೆಯಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಚಾರ, ಆದರೆ ಮೊಸರಿನಸಿಕ್ಕ ಕಲ್ಲಿನಂತೆ ಟಿಪ್ಪುವಿನ ವಿಚಾರಗೋಷ್ಠಿ ಕನ್ನಡದ ಹಬ್ಬದಲ್ಲೇಕೆ?. ಹಾಗಾಗಿ ಈ ಗೋಷ್ಠಿಗೆ ಅನುಮತಿ ನೀಡಬಾರದು ಎಂದು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ಶಿವಕುಮಾರ್ ಆರಾಧ್ಯ, ಹೊಸಹಳ್ಳಿ ಶಿವು, ನಂದೀಶ್ ಇದ್ದರು.