ಕಲಬುರಗಿ: ಕಲಬುರಗಿ ಲೋಕಸಭೆ ಕ್ಷೇತ್ರದ ಸಂಸದ ಡಾ. ಉಮೇಶ್ ಜಾಧವ್ ಅವರನ್ನು ಸ್ವಪಕ್ಷದ ಕಾರ್ಯಕರ್ತರೆ ತೀವ್ರ ತರಾಟೆಗೆ ತಗೆದುಕೊಂಡಿದ್ದಾರೆ. ಕಲಬುರಗಿ ನಗರದ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಭಾಂಗಣದಲ್ಲಿ ಶನಿವಾರ ನಡೆದ ಬಿಜೆಪಿ ಜಿಲ್ಲಾ ಪ್ರಬುದ್ಧರ ಸಭೆಯಲ್ಲಿ ಘಟನೆ ನಡೆದಿದೆ.
ಸಭೆಯನ್ನುದ್ದೇಶಿಸಿ ಉಮೇಶ್ ಜಾಧವ್ ಮಾತನಾಡುವ ವೇಳೆ ಕಳೆದ ಲೋಕಸಭೆ ಚುನಾವಣೆಯಲ್ಲಿ ನನ್ನ ಗೆಲುವಿಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ವಿಧಾನಪರಿಷತ್ ಸದಸ್ಯ ರವಿಕುಮಾರ್ ಅವರ ಕೊಡುಗೆ ಸಾಕಷ್ಟಿದೆ. ಹಗಲು ರಾತ್ರಿ ಎನ್ನದೇ ನನ್ನ ಪರವಾಗಿ ಅವರು ಕೆಲಸ ಮಾಡಿದ್ದಾರೆ ಎಂದು ಹೇಳಿದ್ದರು.
ಜಾಧವ್ ಪರಿಷತ್ ಸದಸ್ಯ ರವಿಕುಮಾರ್ರನ್ನು ಹಾಡಿ ಹೊಗಳುತ್ತಿದ್ದಂತೆ ಕೆರಳಿದ ಕಾರ್ಯಕರ್ತರು ನಾವ್ಯಾರು ನಿಮಗೆ ಮತ ಹಾಕಿಲ್ಲವೆ , ಒಬ್ಬರ ಓಲೈಕೆ ಬದಿಗಿಡಿ. ವಿಧಾನಸಭೆ ಚುನಾವಣೆ ಸಮಯದಲ್ಲಿ ಕಾಣಿಸಿಕೊಳ್ಳದವರು ಈಗ ಯಾಕೆ ಬಂದಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ವೇಳೆ ಮಧ್ಯಪ್ರವೇಶಿಸಿ ಬಿಜೆಪಿ ನಗರ ಜಿಲ್ಲಾಧ್ಯಕ್ಷ ಸಿದ್ದಾಜಿ ಪಾಟೀಲ್, ಗ್ರಾಮೀಣ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ರದ್ದೆವಾಡಗಿ ಹಾಗೂ ಕಲಬುರಗಿ ಮೇಯರ್ ವಿಶಾಲ್ ದರ್ಗಿ ಮಧ್ಯಪ್ರವೇಶಿಸಿ ಸಂಸದರ ಭಾಷಣದ ನಡುವೆ ಈ ರೀತಿ ವರ್ತಿಸಬಾರದು. ಬಿಜೆಪಿ ಶಿಸ್ತಿನ ಪಕ್ಷ. ಇದನ್ನು ಅರ್ಥ ಮಾಡಿಕೊಳ್ಳಬೇಕು. ಏನೇ ಅಸಮಾಧಾನ ಇದ್ದರು ಪಕ್ಷದ ಒಳಗೆ ಅದನ್ನು ಬಗೆ ಹರಿಸಿಕೊಳ್ಳೋಣ ಎಮದು ಕಾರ್ಯಕರ್ತರನ್ನು ಸಮಾಧಾನಪಡಿಸಿದ್ದಾರೆ.
ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಮಾತನಾಡಿ ಸಂಸದ ಉಮೇಶ್ ಜಾಧವ್ ಅವರು ಕಾರ್ಯಕರ್ತರ ಶ್ರಮದಿಂದ ಗೆದ್ದಿದ್ದಾರೆ. ಅವರ ಗೆಲುವು ಪಕ್ಷದ ಕಾರ್ಯಕರ್ತರ ಗೆಲುವು ಎಂದು ಹೇಳುವ ಮೂಲಕ ಕಾರ್ಯಕರ್ತರನ್ನು ಸಮಾಧಾನ ಪಡಿಸಿದರು. ಮಾತು ಮುಮದುವರೆಸಿದ ಜಾಧವ್ ನಾನು ಕಾರ್ಯಕರ್ತರಿಂದ ಗೆದ್ದಿದ್ದೇನೆ. ನಿಮ್ಮ ಎಲ್ಲ ಪ್ರಶ್ನೆಗಳಿಗೆ ನಾನು ಉತ್ತರಿಸಲು ಸಿದ್ಧ ಇದ್ದೇನೆ. ಎರಡು ಗಂಟೆ ಇಲ್ಲಿಯೇ ಕುಳಿತು ಉತ್ತರಿಸುತ್ತೇನೆ ಎಂದು ಹೇಳಿದ್ದಾರೆ.