ಜಿಲ್ಲೆ

ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಗೆ ಆಕ್ರೋಶ: ನಗರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಏರಿಕೆ ಮಾಡಿರುವ ರಾಜ್ಯಸರ್ಕಾರದ ನಿರ್ಧಾರ ಖಂಡಿಸಿ ಗುರುವಾರ ಜಿಲ್ಲಾದ್ಯಂತ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ತಡೆದು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮಾತ್ರವಲ್ಲದೆ ಇಬ್ಬರಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಮುಖವಾಡ ಧರಿಸಿ ಅಣಕು ಪ್ರದರ್ಶನ ಮಾಡಲಾಯಿತು.

ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಅವೈಜ್ಞಾನಿಕ. ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ಗ್ಯಾರಂಟಿ ಯೋಜನೆಗಳಿಗಾಗಿ ಹಣ ಹೊಂದಿಸಲು ಜನರ ಜೇಬಿಗೆ ಕೈ ಹಾಕಿದೆ. ಬೆಲೆ ಏರಿಕೆಯಿಂದಾಗಿ ಮುಂಬರುವ ದಿನಗಳಲ್ಲಿ ಸಾರಿಗೆ ಹಾಗೂ ಅಗತ್ಯ ವಸ್ತುಗಳ ಬೆಲೆಯೂ ಹೆಚ್ಚಳವಾಗಲಿದೆ. ಮಧ್ಯಮ ವರ್ಗ ಹಾಗೂ ಬಡವರ ಜೀವನ ದುಸ್ತರವಾಗಲಿದೆ ಎಂದು ಕಿಡಿಕಾರಿದರು.

ತೈಲ ದರ ಹೆಚ್ಚಳದಿಂದ ಸಹಜವಾಗಿ ಸಾಗಾಣಿಕೆ ವೆಚ್ಚ ಹೆಚ್ಚಾಗಲಿದೆ. ಇದರಿಂದಾಗಿ ಅಕ್ಕಿ, ಬೇಳೆ, ಅಡುಗೆ ಎಣ್ಣೆ, ತರಕಾರಿ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆ ಇನ್ನೂ ದುಬಾರಿಯಾಗಲಿದೆ. ಹಾಗಾಗಿ ಈ ಕೂಡಲೇ ತೈಲ ಬೆಲೆ ಏರಿಕೆ ಮಾಡಿರುವುದನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅಶೋಕ್ ಜಯರಾಂ, ನಗರ ಘಟಕದ ಅಧ್ಯಕ್ಷ ವಸಂತ್‌ಕುಮಾರ್, ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ಶಿವಕುಮಾರ ಆರಾಧ್ಯ, ವಿವೇಕ್, ಹೊಸಹಳ್ಳಿ ಶಿವು, ಚಾಮರಾಜು, ಸಿದ್ದರಾಜುಗೌಡ, ಭೀಮೇಶ್, ಶಂಕರ್, ಚಂದ್ರು ಇತರರಿದ್ದರು.