ರಾಮನಗರ: ಕೇಂದ್ರ ಪುರಸ್ಕೃತ ಯೋಜನೆಯ ಸಂಚಾರಿ ಪಶು ಚಿಕಿತ್ಸಾ ಘಟಕದ ವಾಹನದ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ವಿಕಾರಗೊಂಡಿದ್ದು, ಇದಕ್ಕೆ ಇಲಾಕೆ ಹಾಗೂ ರಾಜ್ಯ ಸರ್ಕಾರ ಕಾರಣ ಎಂದು ಆಕ್ರೋಶಗೊಂಡು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಘಟನೆ ರಾಮನಗರದಲ್ಲಿ ನಡೆಯಿತು.
ನಗರದ ಕೆಂಗಲ್ ಹನುಮಂತಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಸ್ಥಳಕ್ಕೆ ಬಂದ ವಾಹನವನ್ನು ತಡೆದ ಪ್ರತಿಭಟನಾಕಾರರು, ವಾಹನ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಪಶುಪಾಲನಾ ಇಲಾಖೆ ಮಂತ್ರಿ ವೆಂಕಟೇಶ್ ಅವರ ಭಾವಚಿತ್ರದ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರವನ್ನು ಅಳವಡಿಸಲಾಗಿದೆ. ಆದರೆ ನರೇಂದ್ರ ಮೋದಿ ಅವರ ಭಾವಚಿತ್ರ ಹಳೆಯದಾಗಿದ್ದು ವಿಕಾರಗೊಂಡಿದೆ. ಇದನ್ನುತೆಗೆದು ಹೊಸ ಚಿತ್ರ ಅಳವಡಿಸಬಹುದಾಗಿತ್ತು. ಆದರೆ ಆ ಕೆಲಸ ಇಲಾಖೆ ಮಾಡಿಲ್ಲದ ಎಂದು ಆಕ್ರೋಶ ವ್ಯಕ್ತಪಡಿಸಿದರು .
ಕಾರ್ಯಕರ್ತರು ವಾಹನದ ಮೇಲೆ ನಿಂತು, ಮುಂಭಾಗ ಕೂತು ಧಿಕ್ಕಾರ ಕೂಗಿ ಸ್ಥಳಕ್ಕೆ ಜಿಲ್ಲಾಧಿಕಾರಿ, ಜಿಪಂ ಕಾರ್ಯನಿರ್ವಹಣಾಧಿಕಾರಿ, ಪಶು ಪಾಲನಾ ಇಲಾಖೆ ಜಿಲ್ಲಾ ಉಪ ನಿರ್ದೇಶಕರು ಬರಬೇಕು. ಪ್ರಧಾನಿ ಅವರ ಹೊಸ ಭಾವಚಿತ್ರ ಹಾಕಿಸಬೇಕು ಎಂದು ಪಟ್ಟು ಹಿಡಿದರು.
ಈ ವೇಳೆ ಪೊಲೀಸ್ ಅಧಿಕಾರಿಗಳ ಸೂಚನೆ ಮೇರೆಗೆ ಸ್ಥಳಕ್ಕೆ ಬಂದ ಪಶುಪಾಲನಾ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಡಾ. ಆಂಜನಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು. ಡಾ.ಆಂಜನಪ್ಪ ವಾಹನ ಮತ್ತು ಕಾರ್ಯನಿರ್ವಹಿಸುವ ವೈದ್ಯರು ನಿರ್ವಹಣೆಯನ್ನು ಮಹಾರಾಷ್ಟ್ರದ ಎಜುಸ್ಪಾರ್ಕ್ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಅದರ ನಿರ್ವಹಣೆ ಅವರೇ ಮಾಡುತ್ತಾರೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದರು.
ಅಧಿಕಾರಿ ಮಾತಿನಿಂದ ಕುಪಿತರಾದ ಪ್ರತಿಭಟನಾಕಾರರು ಹಾಗಾದರೆ ನೀವು ಏಕೆ ಬಂದಿರಿ ಎಂದು ಘೋಷಣೆ ಕೂಗಿದರು.
ಡಾ. ಆಂಜನಪ್ಪ ತಮ್ಮ ವಾಹನ ಹತ್ತುಲೂ ಬಿಜೆಪಿ ಮುಖಂಡರು ಅಡ್ಡಗಟ್ಟಿದ ಪರಿಣಾಮ, ಅವರ ವಾಹನವನ್ನು ಹಿಮ್ಮುಖವಾಗಿಯೇ ತೆಗೆದುಕೊಂಡು ಹೋಗಬೇಕಾಗಿ ಬಂತು.
ಸರ್ಕಲ್ ಇನ್‌ಸ್ಪೆಕ್ಟರ್ ನರಸಿಂಹಮೂರ್ತಿ ಮತ್ತು ಪೋಲೀಸ್ ಅಧಿಕಾರಿಗಳು ಪಶುಪಾಲನಾ ಇಲಾಖೆ ಅಧಿಕಾರಿಗಳ ಜೊತೆ ಮಾತನಾಡಿ ಈ ಕೂಡಲೇ ವಾಹನದಲ್ಲಿ ಹೊಸ ಭಾವಚಿತ್ರ ಅಳವಡಿಸಿ ಕೊಡುವ ಜವಾಬ್ದಾರಿ ನಾವೇ ಹೊರುತ್ತೇವೆ ಎಂದು ಸಮಾಧಾನಿಸಿ ಪೋಲೀಸ್‌ಠಾಣೆಗೆ ವಾಹನವನ್ನುತೆಗೆದುಕೊಂಡು ಹೋದ ನಂತರ ಪ್ರತಿಭಟನೆ ಬಿಸಿ ತಣ್ಣಾಗಾಯಿತು.