ಜಿಲ್ಲೆ

ಪ್ರಾದೇಶಿಕ ಪಕ್ಷಗಳು ಸ್ವಾರ್ಥಪರ: ಜ್ಯೋತಿ ಶೇಥ್

ಗೋಪಾಲಕೃಷ್ಣ ಪಾದೂರ್

ಉಡುಪಿ: ಜಾರ್ಖಂಡ್, ಬಿಹಾರ ಮೊದಲಾದ ರಾಜ್ಯಗಳು ಹಿಂದುಳಿಯಲು ಪ್ರಾದೇಶಿಕ ಪಕ್ಷಗಳ ಸ್ವಾರ್ಥಪರ ಚಿಂತನೆಯೇ ಕಾರಣ. ಅವರು ದೇಶದ ಅಭಿವೃದ್ಧಿ ಕಡೆಗೆ ಗಮನಹರಿಸುತ್ತಿಲ್ಲ. ರಾಷ್ಟ್ರೀಯ ಪಕ್ಷಗಳಿಂದ ಮಾತ್ರ ದೇಶದ ಐಕ್ಯತೆ ಕಾಪಾಡಲು ಸಾಧ್ಯ ಎಂದು ಬಿಜೆಪಿ ರಾಷ್ಟ್ರೀಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಜ್ಯೋತಿ ಶೇಥ್ ಪಾಂಡ್ಯ ಹೇಳಿದರು.

ಶುಕ್ರವಾರ ಉಡುಪಿ ಜಿಲ್ಲಾ ಕಚೇರಿ ಸಭಾಂಗಣದಲ್ಲಿ ವಿಧಾನಸಭಾ ಚುನಾವಣೆಯ ಪೂರ್ವಭಾವಿಯಾಗಿ ಬಿಜೆಪಿ ಶಿವಮೊಗ್ಗ ಮತ್ತು ಮಂಗಳೂರು ವಿಭಾಗದ ಆರು ಜಿಲ್ಲೆಗಳ ’ಮಹಿಳಾ ಕಾರ್ಯ ಪ್ರಮುಖರ ಸಮಾವೇಶ’ ಉದ್ಘಾಟಿಸಿ, ಮಾತನಾಡಿದರು.

ಬಿಜೆಪಿ ಸಾಂಸ್ಕೃತಿಕ ರಾಷ್ಟ್ರೀಯತೆಯನ್ನು ಪ್ರತಿಪಾದಿಸುತ್ತಿದ್ದು, ದೇಶಕ್ಕೆ ನರೇಂದ್ರ ಮೋದಿಯವರ ಉತ್ತಮ ನಾಯಕತ್ವ ಲಭಿಸಿದೆ. ಕರೋನಾ ಆಪತ್ತಿನ ನಡುವೆಯೂ ಭಾರತದ ಆರ್ಥಿಕತೆ 5ನೇ ಸ್ಥಾನಕ್ಕೆ ಏರಿಕೆಯಾಗಿದೆ. ಮಹಿಳಾ ಮತದಾರರು ಚುನಾವಣೆಯಲ್ಲಿ ನಿರ್ಣಾಯಕರಾಗಿದ್ದು, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಮನೆಮನೆಗೆ ಪ್ರಚಾರ ನಡೆಸಲಾಗುವುದು. ಶಿವಮೊಗ್ಗ ಹಾಗೂ ಮಂಗಳೂರು ವಿಭಾಗ ವ್ಯಾಪ್ತಿಯ 33 ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗೆ ನಾರಿಶಕ್ತಿ ಶ್ರಮಿಸಬೇಕು ಎಂದರು.

ಈ ಸಂದರ್ಭದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಮಹಿಳಾ ಮೋರ್ಚಾ ಸಹ ಪ್ರಭಾರಿ ಅಶ್ವಿನಿ ಎಂ.ಎಲ್., ಮಹಿಳಾ ಕಾರ್ಯ ರಾಜ್ಯ ಸಹ ಸಂಚಾಲಕಿ ಶ್ಯಾಮಲಾ ಎಸ್. ಕುಂದರ್, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಮಹಿಳಾ ಕಾರ್ಯ ಜಿಲ್ಲಾ ಸಹ ಸಂಚಾಲಕಿ ನಳಿನಿ ಪ್ರದೀಪ್ ರಾವ್ ಮೊದಲಾದವರು ಉಪಸ್ಥಿತರಿದ್ದರು.