ವಿಜಯಪುರ: ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನು ಉಚ್ಚಾಟಿಸುವ ಮೂಲಕ ಬಿಜೆಪಿ ಹೈಕಮಾಂಡ್ ತಡವಾಗಿಯಾದರೂ ಯೋಗ್ಯ ನಿರ್ಣಯ ಕೈಗೊಂಡಿದೆ. ಆ ಮೂಲಕ ಹೊಂದಾಣಿಕೆ ರಾಜಕಾರಣಕ್ಕೆ ಬ್ರೇಕ್ ಹಾಕಿದೆ. ಬಿಜೆಪಿಗೆ ಯಾವುದೇ ರೀತಿಯಲ್ಲಿ ಉಪಯೋಗವಾಗದ ಯತ್ನಾಳರ ಉಚ್ಚಾಟನೆಯಿಂದ ಯಾವುದೇ ಹಾನಿಯೂ ಇಲ್ಲ ಎಂದು ನಗರಸಭೆ ಮಾಜಿ ಸದಸ್ಯ ರವಿಕಾಂತ ಬಗಲಿ ಹಾಗೂ ಮುಖಂಡ ರಾಜು ಬಿರಾದಾರ ತಿಳಿಸಿದರು.
ಸ್ವಾರ್ಥ ರಾಜಕಾರಣಕ್ಕಾಗಿ ಪಕ್ಷವನ್ನೇ ಬಲಿ ಕೊಡುತ್ತಿದ್ದ ಯತ್ನಾಳರು ಕಾಂಗ್ರೆಸ್ ನಾಯಕರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬಿಜೆಪಿಯನ್ನು ಸೋಲಿಸಿದ ಅನೇಕ ಉದಾಹರಣೆಗಳಿವೆ. ಬಬಲೇಶ್ವರ ಕ್ಷೇತ್ರದಲ್ಲಿ ತಮ್ಮದೇ ಪಕ್ಷ ಹಾಗೂ ಜಾತಿಯ ವಿಜುಗೌಡ ಪಾಟೀಲ ಯತ್ನಾಳರ ಸೋಲಿನ ಹಿಂದೆ ಯತ್ನಾಳರ ಕೈವಾಡವಿದೆ ಎಂಬುದು ಇದೀಗ ಅವರದ್ದೇ ಹೇಳಿಕೆಗಳಿಂದ ಬಹಿರಂಗಗೊಂಡಿದೆ ಎಂದು ಬುಧವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಸದ್ಯ ಯತ್ನಾಳರ ಉಚ್ಚಾಟನೆ ಖಂಡಿಸಿ ಪ್ರತಿಭಟನೆ ಮಾಡುತ್ತಿರುವವರು ಕೇವಲ ಹಿಂಬಾಲಕರು ಮಾತ್ರ. ಯತ್ನಾಳರಿಂದಾಗಿ ಪಕ್ಷದಿಂದ ದೂರು ಉಳಿದಿದ್ದವರೆಲ್ಲರೂ ಇದೀಗ ಮರಳಿ ಪಕ್ಷದತ್ತ ಮುಖ ಮಾಡುತ್ತಿದ್ದಾರೆ. ಈಗ ಯತ್ನಾಳ ಉಚ್ಚಾಟನೆ ನಂತರ ಪಕ್ಷವು ಬಕೆಟ್‌ಗಳ, ಆಟೋ ರಿಕ್ಷಾ, ಕುಕ್ಕರ್‌ಗಳ ಪಕ್ಷವಾಗಿದೆ ಎಂದು ಯತ್ನಾಳ ಹಿಂಬಾಲಕರು ಲೇವಡಿ ಮಾಡುತ್ತಿದ್ದಾರೆ. ಹರಕು ಬಾಯಿಯಿಂದಾಗಿಯೇ ಯತ್ನಾಳ ಪಕ್ಷದಿಂದ ಉಚ್ಚಾಟನೆಗೊಂಡಿದ್ದಾರೆ. ಇನ್ನಾದರೂ ಅವರ ಹಿಂಬಾಲಕರು ಸಹ ಅರ್ಥಮಾಡಿಕೊಂಡು ಬಿಜೆಪಿ ಮತ್ತು ಹೈಕಮಾಂಡ್ ಕುರಿತ ಟೀಕೆ-ಟಿಪ್ಪಣೆ, ಅವಾಚ್ಯ ಪದಬಳಕೆ, ನಿಂದನೆ ನಿಲ್ಲಿಸದೇ ಹೋದರೆ ಅವರದ್ದೇ ಭಾಷೆಯಲ್ಲಿ ಉತ್ತರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಯಡಿಯೂರಪ್ಪನವರು ಉಚ್ಚಾಟನೆ ಮಾಡಿದ್ದಾರೆ ಎಂದು ಯತ್ನಾಳ ದೂರುತ್ತಿದ್ದಾರೆ. ಆದರೆ, ಯಡಿಯೂರಪ್ಪನವರೇ ಟಿಕೆಟ್ ಕೊಟ್ಟು ಯತ್ನಾಳ ಅವರನ್ನು ಬೆಂಬಲಿಸಿದ್ದರು. ಈ ಹಿಂದೆ ಬಿಜೆಪಿ ಅಧಿಕೃತ ಅಭ್ಯರ್ಥಿ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಸೋಲಿಸಲು ಇದೇ ಯತ್ನಾಳ ಪ್ರಯತ್ನಿಸಿದರು. ಮುಸ್ಲಿಂರನ್ನು ವಿರೋಧಿಸುವ ಯತ್ನಾಳ ಜೆಡಿಎಸ್ ನಲ್ಲಿದ್ದಾಗ ಮುಸ್ಲಿಂರ ಪರವಾಗಿರುವುದನ್ನು ಮರೆತಿದ್ದಾರೆ. ಈಗ ಮೂರನೇ ಬಾರಿ ಉಚ್ಚಾಟನೆ ಮಾಡಲಾಗಿದ್ದು, ಯಾವುದಕ್ಕೂ ಸ್ಥಿರವಾಗಿಲ್ಲ. ತಮಗೆ ಬೇಕಾದಾಗ ಪಂಚಮಸಾಲಿ ಬೋರ್ಡ್ ಹಾಕಿಕೊಳ್ಳುತ್ತಾರೆ. ನಾಟಕದಲ್ಲಿನ ಜೋಕರ್ ಪಾತ್ರಧಾರಿಯಾಗಿದ್ದಾರೆ. ಬಣಜಿಗ, ಕುರುಬ, ಜಂಗಮ, ಬ್ರಾಹ್ಮಣರು, ಶೆಟ್ಟಿ ಸಮಾಜದವರನ್ನೂ ಟೀಕೆ ಮಾಡಿದ್ದಾರೆ. ಹೀಗಾಗಿ ಯತ್ನಾಳ ಉಚ್ಚಾಟನೆ ಮಾಡಿದ್ದು, ಯೋಗ್ಯವಾದ ನಿರ್ಧಾರವಾಗಿದೆ ಎಂದರು.
ಯತ್ನಾಳರಿಗೆ ತಾಕತ್ತಿದ್ದರೆ ಸ್ವಂತ ಪಕ್ಷ ಕಟ್ಟಲಿ. ಅದನ್ನು ಬಿಟ್ಟು ಹಿಂಬಾಲಕರ ಮೂಲಕ ಮರಳಿ ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಿ ಎಂದು ಪ್ರತಿಭಟನೆ ಮಾಡಿಸುತ್ತಿರುವುದು ಶೋಭೆಯಲ್ಲ ಎಂದರು.
ಮುಖಂಡರಾದ ಬಸವರಾಜ ಹಳ್ಳಿ, ಚನ್ನು ಚಿನಗುಂಡಿ ಮತ್ತಿತರರಿದ್ದರು.