ಮಂಗಳೂರು : ಕರಾವಳಿಯಲ್ಲಿ ಬಿಜೆಪಿಯ ಮತಗಳು ಭದ್ರವಾಗಿದೆ ಎನ್ನುವುದನ್ನು ಉಪ ಚುನಾವಣೆಯ ಫಲಿತಾಂಶ ಸಾಬೀತು ಪಡಿಸಿದೆ. ಸರ್ಕಾರದ ಗ್ಯಾರಂಟಿ ಯೋಜನೆ ಹಾಗೂ ಜಾತಿ ಲೆಕ್ಕಾಚಾರ ನಡೆಸಿದ್ದ ಕಾಂಗ್ರೆಸ್ ಅಧಿಕ ಮತಗಳನ್ನು ನಿರೀಕ್ಷಿಸಿತ್ತು. ಆದರೆ ನಿರಾಸೆ ಅನುಭವಿಸಿದೆ. ಜಾತಿ ಲೆಕ್ಕಾಚಾರ ಬದಿಗಿರಿಸಿ ಕಾರ್ಯಕರ್ತನಿಗೆ ಅವಕಾಶ ನೀಡಿದ ಬಿಜೆಪಿಯ ಪ್ರಯೋಗ ಭರ್ಜರಿ ಯಶಸ್ಸು ಕಂಡಿದೆ.
2021ರ ಚುನಾವಣೆಯ ಫಲಿತಾಂಶಕ್ಕೆ ಹೋಲಿಸಿದರೆ ಪಕ್ಷಗಳ ಮತ ಗಳಿಕೆ ಕೊಂಚ ಕಡಿಮೆಯಾಗಿದೆ. ಬಿಜೆಪಿ ಕಳೆದ ಬಾರಿಗಿಂತ 17 ಮತ ಕಡಿಮೆ ಪಡೆದರೂ, ಗೆಲುವಿನ ಅಂತರ ಹೆಚ್ಚಾಗಿರುವುದು ಗಮನಾರ್ಹ ಅಂಶ. ಕಳೆದ ಬಾರಿ ಕೋಟ ಶ್ರೀನಿವಾಸ ಪೂಜಾರಿ 1,593 ಮತಗಳ ಅಂತರದಿಂದ ಜಯ ಸಾಧಿಸಿದ್ದರೆ, ಈ ಬಾರಿ ಕಿಶೋರ್ ಕುಮಾರ್ ಪುತ್ತೂರು 1,697 ಮತಗಳ ಅಂತರದಿಂದ ಗೆದ್ದಿದ್ದಾರೆ.
*ಅಸಿಂಧು ಮತ ಹೆಚ್ಚಳ
ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ 2,079 ಮತ ಪಡೆದರೆ ಈ ಬಾರಿ ರಾಜು ಪೂಜಾರಿ ಅವರಿಗೆ 1,958 ಮತ ಲಭಿಸಿದೆ. ಕಾಂಗ್ರೆಸ್‌ಗೆ 121 ಮತ ಕಡಿಮೆಯಾಗಿದೆ. ಎಸ್‌ಡಿಪಿಐಗೆ ಕಳೆದ ಬಾರಿಗಿಂತ 9 ಮತ ಕಡಿಮೆಯಾಗಿದೆ. ಕಳೆದ ಬಾರಿ 56 ಮತ ಅಸಿಂಧುವಾಗಿದ್ದರೆ, ಈ ಬಾರಿ ಅಸಿಂಧು ಮತ 90ಕ್ಕೆ ಏರಿಕೆ ಆಗಿದೆ.
* ಉತ್ಸಾಹ ತೋರದ ಕಾಂಗ್ರೆಸ್
ಕೆಪಿಸಿಸಿ ಕಾರ್ಯಾಧ್ಯಕ್ಷರು, ಉಭಯ ಜಿಲ್ಲೆಗಳ ಉಸ್ತುವಾರಿ ಸಚಿವರು ಸಹಿತ 20ಕ್ಕೂ ಅಧಿಕ ಹಿರಿಯ ನಾಯಕರುಗಳನ್ನು ಚುನಾವಣೆಯ ಉಸ್ತುವಾರಿಗಾಗಿ ಕೆಪಿಸಿಸಿ ಅಧ್ಯಕ್ಷರು ನೇಮಿಸಿದ್ದರು. ಆದರೆ ಕಾಂಗ್ರೆಸ್ ನಾಯಕರು ಪ್ರಚಾರ ಕಾರ್ಯವನ್ನು ಗಂಭೀರವಾಗಿ ಪರಿಗಣಿಸದೆ ಕೇವಲ ಹೇಳಿಕೆ ನೀಡುವುದಕ್ಕೆ ಸೀಮಿತವಾಗಿದ್ದರು. ಕಾಂಗ್ರೆಸ್‌ನ ಜಾತಿ ಲೆಕ್ಕಾಚಾರ ಕೊಂಚವೂ ವರ್ಕ್ ಔಟ್ ಆಗಿಲ್ಲ. ಯುವ ಅಭ್ಯರ್ಥಿಗೆ ಅವಕಾಶ ಹಾಗೂ ಗೆಲುವಿಗೆ ಸಾಕಷ್ಟು ಮತಗಳಿದ್ದ ಕಾರಣ ಬಿಜೆಪಿ ಪಾಳಯದಲ್ಲಿ ಸಹಜವಾಗಿಯೇ ಹೆಚ್ಚಿನ ಉತ್ಸಾಹವಿತ್ತು. ಸಂಸದರು, ಶಾಸಕರು , ಕಾರ್ಯಕರ್ತರು ಚುನಾವಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಕಾರಣ ಮತಗಳನ್ನು ಕಾಯ್ದುಕೊಳ್ಳುವಲ್ಲಿ ಬಿಜೆಪಿ ಯಶಸ್ಸು ಕಂಡಿದೆ.
............................