ಜಿಲ್ಲೆ

ಮಂಡಲ ಸ್ತರದಲ್ಲಿ ವಿಕಸಿತ ಭಾರತ ಸಮಾವೇಶ

ಗೋಪಾಲಕೃಷ್ಣ ಪಾದೂರ್

ಉಡುಪಿ: ನರೇಂದ್ರ ಮೋದಿಯವರ ಆಡಳಿತದ 11 ವರ್ಷದಲ್ಲಿ ಸೇವೆ, ಅಡಳಿತ ಮತ್ತು ಬಡವರ ಕಲ್ಯಾಣ ಬಗ್ಗೆ ವಿಶೇಷ ಗಮನಹರಿಸಿದ್ದು, ಕಾರ್ಯಕರ್ತರ ಮೂಲಕ ಸರ್ಕಾರದ ಸಾಧನೆಗಳನ್ನು ಜನಮನಕ್ಕೆ ತಲುಪಿಸುವ ನಿಟ್ಟಿನಲ್ಲಿ ಮಂಡಲ ಸ್ತರದಲ್ಲಿ ವಿಕಸಿತ ಭಾರತ ಸಮಾವೇಶ ಹಾಗೂ ತಿಂಗಳಾಂತ್ಯಕ್ಕೆ ಜಿಲ್ಲಾ ಮಟ್ಟದಲ್ಲಿ ಪ್ರಬುದ್ಧರ ಗೋಷ್ಠಿ ನಡೆಸಲು ತೀರ್ಮಾನಿಸಲಾಗಿದೆ ಎಂದು ವಿಕಸಿತ ಭಾರತ ವಿಭಾಗ ಸಂಚಾಲಕ ಕೆ. ಉದಯ್​ ಕುಮಾರ್​ ಶೆಟ್ಟಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೂತ್​ ಮಟ್ಟದಲ್ಲಿ ಜೂನ್​ 23ಕ್ಕೆ ಶ್ಯಾಮಪ್ರಸಾದ್​ ಮುಖರ್ಜಿಯವರ ಬಲಿದಾನ ದಿನ ಅಂಗವಾಗಿ ಭಾವಚಿತ್ರ ಅನಾವರಣ ಕಾರ್ಯಕ್ರಮ ನಡೆಯಲಿದೆ. ತುರ್ತು ಪರಿಸ್ಥಿತಿ ಜಾರಿಗೊಳಿಸಿ 50 ವರ್ಷ ಸಂದ ಹಿನ್ನೆಲೆಯಲ್ಲಿ ಜೂನ್​ 25ರಂದು ಮಂಡಲ ಮತ್ತು ಜಿಲ್ಲಾ ಮಟ್ಟದಲ್ಲಿ ಯುವ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಜುಲೈ 6ರಂದು ಮುಖರ್ಜಿ ಜನ್ಮದಿನಾಚರಣೆ ಅಂಗವಾಗಿ ಎಲ್ಲಾ ಬೂತ್​ಗಳಲ್ಲಿ ತಾಯಿಯ ಹೆಸರಿನಲ್ಲಿ ಗಿಡನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರದ ಅಭೂತಪೂರ್ವ ಸಾಧನೆ

ಪ್ರಧಾನ ಮಂತ್ರಿ ಗರೀಬ್​ ಕಲ್ಯಾಣ ಯೋಜನೆಯಲ್ಲಿ 81 ಕೋಟಿ ಜನರಿಗೆ ಉಚಿತ ಪಡಿತರ, 11 ಕೋಟಿ ರೈತರಿಗೆ ಪ್ರಧಾನಮಂತ್ರಿ ಶಿಸಾನ್​ ಸಮ್ಮಾನ್​ ನಿಧಿ, 40 ಕೋಟಿ ಜನರಿಗೆ ಪ್ರಧಾನ ಮಂತ್ರಿ ಆಯುಷ್ಮಾನ್​ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ಕಳೆದ 11 ವರ್ಷಗಳಲ್ಲಿ ಸರ್ಕಾರವು ದಶಕಗಳ ಜಡತ್ವ ಮುರಿದು 'ವಿಕಸಿತ ಭಾರತ'ಕ್ಕೆ ಭದ್ರ ಬುನಾದಿ ಹಾಕಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ 370ನೇ ವಿಧಿ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಲಾಗಿದೆ. ಅಯೋಧ್ಯೆಯಲ್ಲಿ ಭವ್ಯ ಶ್ರೀ ರಾಮಮಂದಿರ ನಿರ್ಮಿಸಿ ಭಾರತೀಯರ ಶತಮಾನಗಳ ಕನಸನ್ನು ನನಸು ಮಾಡಲಾಗಿದೆ. ಬಿಜೆಪಿಯ ಸರ್ವವ್ಯಾಪಿ, ಸರ್ವಸ್ವರ್ಶಿ ಸಂಕಲ್ಪದ ಸಾಕಾರವಾಗಿದೆ. ವಿಶ್ವದೆಲ್ಲೆಡೆ ಭಾರತಕ್ಕೆ ಮನ್ನಣೆ ದೊರೆತಿದೆ ಎಂದರು.

ಜಿಲ್ಲಾ ಸಂಚಾಲಕ ರಾಜೇಶ್​ ಕಾವೇರಿ, ಬಿಜೆಪಿ ಪ್ರಮುಖರಾದ ದಿನಕರ ಶೆಟ್ಟಿ ಹೆರ್ಗ, ರೇಶ್ಮಾ ಉದಯ್​ ಶೆಟ್ಟಿ, ಸಂಧ್ಯಾರಮೇಶ್​, ಗೀತಾಂಜಲಿ ಸುವರ್ಣ, ವಿಜಯಕುಮಾರ್​ ಉದ್ಯಾವರ, ಶಿವಕುಮಾರ್​ ಅಂಬಲಪಾಡಿ ಮೊದಲಾದವರು ಉಪಸ್ಥಿತರಿದ್ದರು.