ಜಿಲ್ಲೆ

ಕಾಂಗ್ರೆಸ್ ಧೂಳಿಪಟ ನಿಶ್ಚಿತ

Chitradurga

ಹೊನ್ನಾಳಿ: ದೇಶದ ಬೆರಳೆಣಿಕೆಯಷ್ಟು ರಾಜ್ಯಗಳಲ್ಲಿ ಅಧಿಕಾರ ಹೊಂದಿರುವ ಕಾಂಗ್ರೆಸ್ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯದಲ್ಲೂ ಧೂಳಿಪಟವಾಗುವುದು ನಿಶ್ಚಿತ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಭವಿಷ್ಯ ನುಡಿದರು.

ನಗರದಲ್ಲಿ ತಾಲೂಕು ಬಿಜೆಪಿ ಭಾನುವಾರ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಯಾತ್ರೆಯನ್ನುದ್ದೇಶಿಸಿ ಮಾತನಾಡಿದರು.

ನಾನು ರಾಜ್ಯದೆಲ್ಲೆಡೆ ಪ್ರವಾಸ ಮಾಡಿದ ಸಂದರ್ಭ ಕಾಂಗ್ರೆಸ್ ಹಿನ್ನಡೆ ಅನುಭವಿಸುತ್ತಿರುವುದನ್ನು ನೋಡಿದ್ದೇನೆ. ಕಾಂಗ್ರೆಸ್‌ನ ಹಲವಾರು ಟಿಕೆಟ್ ಆಕಾಂಕ್ಷಿಗಳು ತಮಗೆ ಕಾಂಗ್ರೆಸ್ ಟಿಕೆಟ್ ಬೇಡ ಎನ್ನುವ ಸ್ಥಿತಿಗೆ ತಲುಪಿದ್ದಾರೆ ಎಂದರು.

ಹೊನ್ನಾಳಿಯಲ್ಲಿ ಶಾಸಕ ಎಂ.ಪಿ. ರೇಣುಕಾಚಾರ್ಯ ಗೆಲುವಿನೊಂದಿಗೆ ರಾಜ್ಯದಲ್ಲಿ ಬಿಜೆಪಿ 140ಕ್ಕೂ ಹೆಚ್ಚು ಸ್ಥಾನ ಗಳಿಸಿ ಅಧಿಕಾರಕ್ಕೆ ಬರಲಿದೆ. ತಾಲೂಕಿನ ಕಾಂಗ್ರೆಸ್ ಮುಖಂಡರೇ, ಈಗಾಗಲೇ ರೇಣುಕಾಚಾರ್ಯ ಗೆದ್ದಾಗಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ ಎಂದರು.

ಕಾಂಗ್ರೆಸ್ ಗ್ಯಾರಂಟಿ ಕಾರ್ಡ್‌ಗಿಲ್ಲ ವಾರೆಂಟಿ: ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಉಚಿತವಾಗಿ ಕುಟುಂಬದ ಹಿರಿಯ ಮಹಿಳೆಗೆ 2 ಸಾವಿರ ಕೊಡುವುದಾಗಿ ಭರವಸೆ ನೀಡುತ್ತಿದ್ದಾರೆ. ಹೀಗೆ ತಲಾ 2 ಸಾವಿರ ಕೊಟ್ಟರೆ ರಾಜ್ಯದ ಬಜೆಟ್‌ಗಿಂತ ದುಪ್ಪಟ್ಟು ಹಣ ತರಬೇಕಾಗುತ್ತದೆ. ಹಣ ಎಲ್ಲಿಂದ ತರುತ್ತಾರೆ? ಡಿ.ಕೆ. ಶಿವಕುಮಾರ್ ಲೂಟಿ ಹೊಡೆದಿರುವ ಹಣದಿಂದ ಮಹಿಳೆಯರಿಗೆ ಈ ಹಣ ಕೊಡುತ್ತಾರಾ? ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣವೇ ರೈತರಿಗೆ ಹಲವಾರು ಸೌಲಭ್ಯ ನೀಡಿ, ಅವರ ಆದಾಯ ದ್ವಿಗುಣಗೊಳಿಸಿದ್ದಾರೆ. ಬಿ.ಎಸ್. ಯಡಿಯೂರಪ್ಪ, ಸಿಎಂ ಬೊಮ್ಮಾಯಿ ಅವರು ರೈತರ ಹಿತಕಾಯುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ, ರಾಜ್ಯದಲ್ಲಿ ವಿಜಯಸಂಕಲ್ಪ ಯಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುತ್ತಿದ್ದಾರೆ ಎಂದರು.

ಶಾಸಕ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಮಾ.25ರ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಈಗಾಗಲೇ ಪ್ರತಿ ಗ್ರಾಮದಿಂದ ಎಷ್ಟು ಬಸ್‌ಗಳು ಬೇಕು ಎಂದು ಪಟ್ಟಿ ಮಾಡಿದ್ದೇವೆ. ಈಗಿನ ಮಾಹಿತಿ ಪ್ರಕಾರ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಿಂದ 30 ಸಾವಿರ ಜನರನ್ನು ಕರೆದೊಯ್ಯಲಾಗುವುದು ಎಂದರು.

ಇದಕ್ಕೂ ಮೊದಲು ಶಾಸಕ ಎಂ.ಪಿ. ರೇಣುಕಾಚಾರ್ಯ ನಿವಾಸದಿಂದ ವಿಜಯ ಸಂಕಲ್ಪ ಯಾತ್ರೆ ಹೊರಟು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಆಗಮಿಸಿತು. ರಾಯಣ್ಣ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಇದೇ ವೇಳೆ ಕಾಂಗ್ರೆಸ್‌ನ ಮುಖಂಡರು ಬಿಜೆಪಿ ಸೇರ್ಪಡೆಗೊಂಡರು.

ದತ್ತಾತ್ರಿ, ಪುರಸಭೆ ಅಧ್ಯಕ್ಷೆ ಸುಮಾ ಮಂಜುನಾಥ್, ಉಪಾಧ್ಯಕ್ಷೆ ರಂಜಿತಾ ಚನ್ನಪ್ಪ, ಸದಸ್ಯರಾದ ಬಾಬು ಹೋಬಳದಾರ್, ರಂಗನಾಥ್, ಮುಖಂಡರಾದ ಮಂಜುನಾಥ್ ನೆಲಹೊನ್ನೆ, ಅರಕೆರೆ ನಾಗರಾಜ್, ನವೀನ್ ಇಂಚರ, ಶಿವಾನಂದ್, ಪಾಲಕ್ಷಪ್ಪ, ಶಿವುಹುಡೇದ್,ರಾಜು ಪಲ್ಲಳ್ಳಿ ಮತ್ತಿತರರಿದ್ದರು.